ADVERTISEMENT

ಬೆತ್ತಲೆ ವಿಡಿಯೊ ಬ್ಲ್ಯಾಕ್‌ಮೇಲ್: ಮತ್ತೆ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 19:30 IST
Last Updated 12 ಅಕ್ಟೋಬರ್ 2021, 19:30 IST
ಕಸಮ್ ಖಾನ್
ಕಸಮ್ ಖಾನ್   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರನ್ನು ಪರಿಚಯಿಸಿಕೊಂಡು ಬೆತ್ತಲೆಗೊಳಿಸಿ ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆ ಕೈಗೊಂಡಿದ್ದ ಸಿಐಡಿ ಸೈಬರ್ ಕ್ರೈಂ ಪೊಲೀಸರು, ಹರಿಯಾಣದ ಇಕ್ಬಾಲ್, ಮುಜಾಹೀದ್ ಹಾಗೂ ಆಸೀಫ್ ಎಂಬುವರನ್ನು ಕಳೆದ ತಿಂಗಳು ಬಂಧಿಸಿದ್ದರು. ಇಂಥದ್ದೇ ಪ್ರಕರಣದಲ್ಲಿ ಇದೀಗ, ರಾಜಸ್ಥಾನದ ಸಾಕೀರ್, ಕಸಮ್‌ ಖಾನ್ ಹಾಗೂ ಜಮೀಲ್ ಖಾನ್ ಎಂಬುವರನ್ನು ಸೆರೆ ಹಿಡಿದಿದ್ದಾರೆ.

‘ಯುವತಿಯರ ಫೋಟೊ ಬಳಸಿಕೊಂಡು ನಕಲಿ ಖಾತೆ ತೆರೆಯುತ್ತಿದ್ದ ಆರೋಪಿಗಳು, ಸಾರ್ವಜನಿಕರಿಗೆ ಫ್ರೆಂಡ್ ರಿಕ್ವೆಸ್ ಕಳುಹಿಸಿ ಪರಿಚಯಿಸಿಕೊಳ್ಳುತ್ತಿದ್ದರು. ಯುವತಿಯರ ಹೆಸರಿನಲ್ಲಿ ಸಲುಗೆಯಿಂದ ಸಂದೇಶ ಕಳುಹಿಸುತ್ತಿದ್ದರು. ಲೈಂಗಿಕವಾಗಿ ಮಾತನಾಡಿ ಪ್ರಚೋದಿಸುತ್ತಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.

ADVERTISEMENT

‘ಪ್ರಚೋದನೆಗೆ ಒಳಗಾದ ಜನ, ಮೈ ಮೇಲಿನ ಬಟ್ಟೆ ತೆಗೆದು ವಿಡಿಯೊ ಕರೆ ಮಾಡುತ್ತಿದ್ದರು. ಇದೇ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ಆರೋಪಿಗಳು, ಸಾರ್ವಜನಿಕರಿಗೆ ವಿಡಿಯೊ ಕಳುಹಿಸಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು. ಹಣ ನೀಡದಿದ್ದರೆ ಯೂಟ್ಯೂಬ್, ಫೇಸ್‌ಬುಕ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು’ ಎಂದೂ ತಿಳಿಸಿವೆ.

‘ಕೃತ್ಯಕ್ಕೆಂದೇ ಆರೋಪಿಗಳು, ಅಪರಿಚಿತರ ದಾಖಲೆಗಳನ್ನು ಕದ್ದು ಅವರ ಹೆಸರಿನಲ್ಲೇ ಸಿಮ್‌ ಕಾರ್ಡ್‌ ಖರೀದಿಸುತ್ತಿದ್ದರು. ಅದೇ ದಾಖಲೆ ಬಳಸಿಕೊಂಡು ಬ್ಯಾಂಕ್‌ ಖಾತೆಗಳನ್ನೂ ತೆರೆಯುತ್ತಿದ್ದರು’ ಎಂದೂ ಮೂಲಗಳು ಹೇಳಿವೆ.

ಎಚ್ಚರಿಕೆ ವಹಿಸಿ: ‘ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗಬಾರದು’ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.