ADVERTISEMENT

ಬೆಂಗಳೂರು: ‘ಡ್ರಗ್ಸ್’ ಬಲೆಯಲ್ಲಿ ಉದ್ಯಮಿ, ₹1.98 ಕೋಟಿ ವಂಚನೆ

ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ * ಬಂಧನ ಭೀತಿಯಲ್ಲಿ ಹಣ ನೀಡಿದ ಸಂತ್ರಸ್ತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 16:07 IST
Last Updated 10 ಡಿಸೆಂಬರ್ 2023, 16:07 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂಬೈ ಪೊಲೀಸರ ಹೆಸರಿನಲ್ಲಿ ನಗರದ ಉದ್ಯಮಿಯೊಬ್ಬರನ್ನು ಬೆದರಿಸಿ ₹ 1.98 ಕೋಟಿ ಪಡೆದು ವಂಚಿಸಲಾಗಿದೆ.

ನಗರದ ಎಚ್‌ಎಸ್‌ಆರ್‌ ಲೇಔಟ್ ನಿವಾಸಿಯಾಗಿರುವ 52 ವರ್ಷದ ಉದ್ಯಮಿ ವಂಚನೆ ಬಗ್ಗೆ ದೂರು ನೀಡಿದ್ದು, ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

‘ಡಿ. 2ರಂದು ಉದ್ಯಮಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಆಧಾರ್ ಬಳಸಿ, ತೈವಾನ್‌ಗೆ ಡ್ರಗ್ಸ್ ಕೊರಿಯರ್ ಕಳುಹಿಸಲಾಗುತ್ತಿದೆ. ನಿಮ್ಮ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ’ ಎಂದಿದ್ದ. ಹೆದರಿದ್ದ ಉದ್ಯಮಿ, ಯಾರಿಗೂ ಕೊರಿಯರ್ ಕಳುಹಿಸಿಲ್ಲವೆಂದು ಹೇಳಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕೆಲ ಹೊತ್ತಿನ ನಂತರ ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿ, ‘ನೀವು ಅಕ್ರಮವಾಗಿ ಡ್ರಗ್ಸ್ ಸಾಗಿಸುತ್ತಿದ್ದಿರಾ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ. ನಂತರ, ನಿಮ್ಮೂರಿಗೆ ಬಂದು ನಿಮ್ಮನ್ನು ಬಂಧಿಸಿ ಮುಂಬೈಗೆ ಕರೆತರುತ್ತೇವೆ’ ಎಂದಿದ್ದರು. ಮತ್ತಷ್ಟು ಹೆದರಿದ್ದ ಉದ್ಯಮಿ, ಕೊರಿಯರ್ ತಮ್ಮದಲ್ಲವೆಂದು ವಾದಿಸಿದ್ದರು’ ಎಂದು ಹೇಳಿದರು.

‘ಕೊರಿಯರ್ ತಮ್ಮದಲ್ಲವೆಂದರೆ, ನಿಮ್ಮ ವೈಯಕ್ತಿಕ ಮಾಹಿತಿ ಕಳುಹಿಸಿ’ ಎಂದು ಆರೋಪಿಗಳು ಕೇಳಿದ್ದರು. ಅದನ್ನು ನಂಬಿದ್ದ ಆರೋಪಿ, ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದರು. ವೈಯಕ್ತಿಕ ಮಾಹಿತಿ ಪರಿಶೀಲನೆ ನಡೆಸಬೇಕೆಂದು ಹೇಳಿದ್ದ ಆರೋಪಿಗಳು, ಶುಲ್ಕದ ಹೆಸರಿನಲ್ಲಿ ಹಣ ಪಡೆದಿದ್ದರು. ಇದಾದ ನಂತರವೂ ನಾನಾ ಕಾರಣ ನೀಡಿ ಹಂತ ಹಂತವಾಗಿ ಉದ್ಯಮಿಯಿಂದ ₹ 1.98 ಕೋಟಿ ಪಡೆದುಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರು. ಬೇಸತ್ತ ಉದ್ಯಮಿ, ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ನಂತರವೇ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.