ADVERTISEMENT

ಹೂಡಿಕೆದಾರರಿಗೆ ವಂಚನೆ: ₹1.8 ಕೋಟಿ ಕಳೆದುಕೊಂಡ ಬೆಂಗಳೂರಿನ ಮೂವರು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 21:32 IST
Last Updated 26 ನವೆಂಬರ್ 2023, 21:32 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ಬೆಂಗಳೂರು: 10 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 26 ಹೂಡಿಕೆದಾರರಿಗೆ ಒಟ್ಟು ₹2.9 ಕೋಟಿ ವಂಚಿಸಿರುವ ಜಾಲ ಪತ್ತೆಯಾಗಿದ್ದು, ಈ ವಂಚನೆ ಜಾಲಕ್ಕೆ ಸಿಲುಕಿ ಬೆಂಗಳೂರಿನ ಮೂವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಆಗಸ್ಟ್‌ನಿಂದ ನವೆಂಬರ್‌ಒಳಗೆ ಈ ವಂಚನೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ₹10 ಲಕ್ಷ ಹೂಡಿಕೆ ಮಾಡುವಂತೆ ಪ್ರಕಟಣೆ ನೀಡಲಾಗಿತ್ತು. ಅವರದ್ದೇ ವೆಟ್‌ಸೈಟ್‌ ಹಾಗೂ ನಕಲಿ ಆ್ಯಪ್‌ ಮೂಲಕ ಹೂಡಿಕೆ ಮಾಡುವಂತೆ ತಿಳಿಸಿ, ಹಣ ವರ್ಗಾವಣೆಗೆ ವಿವಿಧ ಬ್ಯಾಂಕ್‌ ಖಾತೆ ನೀಡಿ ವಂಚಿಸಲಾಗಿದೆ.

ಬೆಂಗಳೂರಿನ ಮೂವರು ಹೂಡಿಕೆದಾರರು ₹1.8 ಕೋಟಿ ಕಳೆದುಕೊಂಡಿದ್ದಾರೆ. ವೈದ್ಯರೊಬ್ಬರಿಗೆ ₹70 ಲಕ್ಷ ವಂಚನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೂರು ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಆರು ಎಫ್‌.ಐ.ಆರ್‌ಗಳು ದಾಖಲಾಗಿವೆ.

ಈ ವಂಚನೆ ಪ್ರಕರಣದ ಸೂತ್ರಧಾರ ಆದಿತ್ಯ ಅಗರ್‌ವಾಲ್‌ ಎಂಬ ಶಂಕೆ ವ್ಯಕ್ತವಾಗಿದೆ. ಆತನಿಗೆ ಒಂಬತ್ತು ಮಂದಿ ಬೇರೆ ಹೆಸರಿನಲ್ಲಿ ನೆರವು ನೀಡುತ್ತಿದ್ದರು ಎಂದು ಗೊತ್ತಾಗಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರ್ಪಡೆಯಾದರೆ ಅಗರ್‌ವಾಲ್‌ ಅವರು ಹೂಡಿಕೆ ಮಾಡುವುದು ಹೇಗೆ? ಯಾವ ಷೇರುಗಳನ್ನು ಆಯ್ಕೆ ಮಾಡಬೇಕು ಎಂಬ ಸಲಹೆ ನೀಡುತ್ತಾರೆ ಎಂದು ನಂಬಿಸಲಾಗುತ್ತಿತ್ತು. ಅದಾದ ಮೇಲೆ ನಾನಾ ರೀತಿಯಲ್ಲಿ ವಂಚಿಸಿರುವುದು ಗೊತ್ತಾಗಿದೆ.

ಕ್ಯಾಮೆರಾದ ಎದುರು ಅಗರ್‌ವಾಲ್‌ ಎಂಬ ವ್ಯಕ್ತಿ ಮುಖ ಪ್ರದರ್ಶನ ಮಾಡುತ್ತಿರಲಿಲ್ಲ. ಪವರ್‌ ಪಾಯಿಂಟ್‌ ಮೂಲಕವೇ ಹೂಡಿಕೆ ಮಾಡುವ ಮಾಹಿತಿ ನೀಡುತ್ತಿದ್ದರು ಎಂದು ಹಣ ಕಳೆದುಕೊಂಡವರು ಹೇಳಿದ್ದಾರೆ.

‘₹70 ಲಕ್ಷ ಹಣ ಕಳೆದುಕೊಂಡಿದ್ದ ಪ್ರಕರಣದಲ್ಲಿ, ₹16 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿದೆ. ಎರಡನೇ ಪ್ರಕರಣದಲ್ಲಿ ಬ್ಯಾಂಕ್‌ನಿಂದ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.

‘ವ್ಯಕ್ತಿಯೊಬ್ಬರು ₹ 19 ಲಕ್ಷ ವರ್ಗಾವಣೆ ಮಾಡಿದ್ದರು. ಅದರಲ್ಲಿ ₹ 1.50 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ.ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.