ಬೆಂಗಳೂರು: ಶ್ರೀಲಂಕಾ ಸೇರಿದಂತೆ ವಿದೇಶದ ಕ್ಯಾಸಿನೊಗಳಲ್ಲಿ ಕೆಲಸ ಮಾಡುವ ಏಜೆಂಟರ ಜಾಲ ಪತ್ತೆ ಮಾಡಿರುವ ನಗರ ಪೊಲೀಸರು, ಕ್ಯಾಸಿನೊ ನಡೆಸುವವರು ಸೈಬರ್ ಅಪರಾಧ ಕಿಂಗ್‌ಪಿನ್‌ಗಳ ಜತೆ ನಂಟು ಹೊಂದಿರಬಹುದು ಅಥವಾ ಸೈಬರ್ ಅಪರಾಧದಲ್ಲಿ ತೊಡಗಿಸಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅಷ್ಟೇ ಅಲ್ಲದೆ, ವಿಶಾಖಪಟ್ಟಣ, ಚೆನ್ನೈ, ತಿರುವನಂತಪುರ ಮತ್ತು ಹೈದರಾಬಾದ್‌ನಲ್ಲಿ ಈ ಏಜೆಂಟರು ಸಕ್ರಿಯರಾಗಿದ್ದಾರೆ. ಆದರೆ, ಈ ಜಾಲವು ಉತ್ತರ ಭಾರತದ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.
‘ಏಜೆಂಟರು ತಮ್ಮ ಕ್ಯಾಸಿನೊಗಳ ಬಗ್ಗೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟೆಲಿಗ್ರಾಮ್ ಮತ್ತು ಇತರೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆಸಕ್ತ ಗ್ರಾಹಕರು ಜಾಲತಾಣದಲ್ಲಿನ ಲಿಂಕ್ ಕ್ಲಿಕ್ ಮಾಡಿದಾಗ, ಏಜೆಂಟರು ಅವರನ್ನು ಸಂಪರ್ಕಿಸಿ, ಪ್ಯಾಕೇಜ್‌ಗಳ ಬಗ್ಗೆ ವಿವರಿಸುತ್ತಾರೆ. ಪ್ಯಾಕೇಜ್ ಆಧರಿಸಿ, ಶುಲ್ಕ ಪಡೆದುಕೊಳ್ಳುತ್ತಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಗ್ರಾಹಕರ ವಿದೇಶ ಪ್ರಯಾಣ, ಊಟ ಹಾಗೂ ಹೋಟೆಲ್ ವ್ಯವಸ್ಥೆ ಸೇರಿ ಇತರೆ ಸೌಲಭ್ಯವನ್ನು ಏಜೆಂಟರೇ ಒದಗಿಸುತ್ತಾರೆ. ಕ್ಯಾಸಿನೊಗಳು ಗ್ರಾಹಕರಿಗೆ ಪ್ಯಾಕೇಜ್ ಪ್ರಕಾರ ಪಾವತಿಸಿದ ಮೊತ್ತಕ್ಕೆ ಸಮಾನವಾದ ನಾಣ್ಯಗಳನ್ನು ಒದಗಿಸುತ್ತವೆ’ ಎಂದರು.
‘ಗೋವಾದಲ್ಲಿ ಕ್ಯಾಸಿನೊ ಇರುವಾಗ ವಿದೇಶದ ಕ್ಯಾಸಿನೊಗಳಿಗೆ ಏಕೆ ಭೇಟಿ ನೀಡುತ್ತಾರೆ ಎಂದು ಆರಂಭದಲ್ಲಿ ಪೊಲೀಸರಿಗೆ ಗೊಂದಲ ಉಂಟಾಗಿತ್ತು. ತನಿಖೆ ನಡೆಸಿದಾಗ, ವಿದೇಶಿ ಕ್ಯಾಸಿನೊಗಳಲ್ಲಿ ಗೆಲುವಿನ ಪ್ರಮಾಣ ಶೇಕಡ 33ರಷ್ಟು ಇದ್ದರೆ, ಗೋವಾದಲ್ಲಿ ಕೇವಲ ಶೇಕಡ 8 ರಷ್ಟಿದೆ. ಈ ಏಜೆಂಟರು ಭಾರತದಲ್ಲಿ ನೋಂದಾಯಿಸಿಕೊಂಡಿಲ್ಲ ಹಾಗೂ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ವಿದೇಶಿ ಕ್ಯಾಸಿನೊಗಳಿಗೆ ಹೇಗೆ ವರ್ಗಾಯಿಸಲಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ’ ಎಂದು ಅಧಿಕಾರಿಗಳು ಹೇಳಿದರು.
‘ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ಕ್ಯಾಸಿನೊ ನಡೆಸುವವರಿಗೆ ಕಳುಹಿಸಿರುವ ಸಾಧ್ಯತೆ ಇರಬಹುದು. ಇದು ಹಣ ಅಕ್ರಮ ವರ್ಗಾವಣೆ ವ್ಯಾಪ್ತಿಗೆ ಬರಲಿದೆ. ತನಿಖೆ ಪೂರ್ಣಗೊಂಡ ನಂತರ, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಪತ್ರ ಬರೆಯಲಾಗುವುದು. ಹಲವು ಏಜೆಂಟರನ್ನು ಪತ್ತೆ ಮಾಡಿದ್ದು, ತನಿಖೆ ನಡೆಯುತ್ತಿದೆ’ ಎಂದು ವಿವರಿಸಿದರು.
ಆಗ್ನೇಯ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣದ ತನಿಖೆ ಸಂದರ್ಭದಲ್ಲಿ ಈ ಜಾಲವು ಬೆಳಕಿಗೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.