ADVERTISEMENT

ಬಕೆಟ್‌ಗಳಲ್ಲಿ ಹುಂಡಿ ಹಣ ವಿಡಿಯೊ ವೈರಲ್!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:14 IST
Last Updated 1 ಆಗಸ್ಟ್ 2019, 20:14 IST

ದಾಬಸ್ಪೇಟೆ: ದೇವಾಲಯದ ಕಾಣಿಕೆ ಹುಂಡಿಯ ಎಣಿಕೆ ವೇಳೆ ಅರ್ಚಕರು ಬಕೆಟ್‌ಗಳಲ್ಲಿ ಹಣ ಸಾಗಿಸಿದ್ದಾರೆಂಬ ವಿಡಿಯೊ ತುಣುಕು 3–4 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ!

ನೆಲಮಂಗಲ ತಾಲ್ಲೂಕಿನಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವರಹೊಸಹಳ್ಳಿಯ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಾಲಯದಲ್ಲಿ ಈ ಘಟನೆ ನಡೆದಿದೆ.

ಇಲಾಖೆ ನಿಯಮದಂತೆ ಜುಲೈ 15ರಂದು ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿನ ಹಣ ಎಣಿಕೆ ನಡೆದಿತ್ತು. ಈ ದೃಶ್ಯ ದೇವಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅರ್ಚಕರು ಹಣ ತೆಗೆದುಕೊಂಡು ಹೋಗಿದ್ದಾರೆ ಎಂದುನಂಬಿಸಲು ಯಾರೋ ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಮುಜರಾಯಿ ಇಲಾಖೆ ಕಾರ್ಯನಿರ್ವಾಹಣಾಧಿಕಾರಿ (ಪ್ರಭಾರ), ಸೋಂಪುರ ನಾಡಕಚೇರಿಯ ಉಪ ತಹಶೀಲ್ದಾರ್‌ ಜುಂಜೇಗೌಡ, ‘ಇಲಾಖೆಯ ಸಹಾಯುಕ ಆಯುಕ್ತ ಶಿವಕುಮಾರಯ್ಯ ಮತ್ತು ಪೊಲೀಸರ ಸಮ್ಮುಖದಲ್ಲಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪಾರದರ್ಶಕವಾಗಿ ಎಣಿಕೆ ನಡೆದಿದೆ. ವಿಡಿಯೊದಲ್ಲಿ ಬಿಂಬಿಸಿದಂತೆ ಏನೂ ನಡೆದಿಲ್ಲ. ಇಂತಹ ಆರೋಪದಲ್ಲಿ ಹುರುಳಿಲ್ಲ’ ಎಂದರು.

‘ಸಿಸಿಟಿವಿ ಕ್ಯಾಮೆರಾ ದೃಶ್ಯವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಎಣಿಕೆ ಮಾಡಲು ಹಣವನ್ನು ಬಕೆಟ್‌ಗಳಲ್ಲಿ ಈ ಕಡೆಯಿಂದ ಆ ಕಡೆಗೆ ತೆಗೆದುಕೊಂಡು ಹೋಗಲಾಗಿದೆಯೇ ಹೊರತು, ಹುಂಡಿ ಹಣ ದುರುಪಯೋಗ ಆಗಿಲ್ಲ' ಎಂದು ದೇವಾಲಯದ ಪ್ರಭು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.