ADVERTISEMENT

ದಾಬಸ್‌ ಪೇಟೆ: ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಮೂರನೇ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 0:06 IST
Last Updated 28 ನವೆಂಬರ್ 2024, 0:06 IST
ಹುಣಸೇಹಳ್ಳ ಸಮೀಪದ ಬೋನಿಗೆ ಬಿದ್ದಿರುವ ಮೂರನೇ ಚಿರತೆ
ಹುಣಸೇಹಳ್ಳ ಸಮೀಪದ ಬೋನಿಗೆ ಬಿದ್ದಿರುವ ಮೂರನೇ ಚಿರತೆ   

ದಾಬಸ್ ಪೇಟೆ: ಶಿವಗಂಗೆ ಬೆಟ್ಟದ ತಪ್ಪಲಲ್ಲಿರುವ ಕಾಡಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಬುಧವಾರ ಮತ್ತೊಂದು ಚಿರತೆ ಸೆರೆಯಾಗಿದೆ. 

‌‘ಶಿವಗಂಗೆ ಬೆಟ್ಟದ ಹಿಂಬದಿಯ ಹುಣಸೇಹಳ್ಳ ಸಮೀಪ ಇಟ್ಟಿದ್ದ ಬೋನಿನಲ್ಲಿ ಸಂಜೆ 4.30ರ ಸಮಯದಲ್ಲಿ ಚಿರತೆ ಸೆರೆಯಾಗಿದೆ. ಇದು ಸುಮಾರು ಎಂಟು ವರ್ಷ ವಯಸ್ಸಿನ ಗಂಡು ಚಿರತೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ದಿನಗಳಲ್ಲಿ ಸೆರೆಯಾಗಿರುವ ಮೂರನೇ ಚಿರತೆ ಇದು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಈವರೆಗೆ ಎರಡು ಗಂಡು ಮತ್ತು ಒಂದು ಹೆಣ್ಣು ಚಿರತೆ ಸೆರೆ ಸಿಕ್ಕಿವೆ. ಈ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ರವಾನಿಸಿದ್ದಾರೆ. ಈಗ ಸೆರೆ ಸಿಕ್ಕಿರುವ ಚಿರತೆಯ ಕೂದಲು, ಜೊಲ್ಲನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈವರೆಗೂ ಮೂರು ಚಿರತೆಗಳು ಸೆರೆ ಸಿಕ್ಕಿದ್ದರೂ, ನ.18ರಂದು ಕಂಬಾಳು ಗೊಲ್ಲರಹಟ್ಟಿಯ ಕರಿಯಮ್ಮ ಅವರನ್ನು ಕೊಂದ ಚಿರತೆ ಯಾವುದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಆ ಚಿರತೆ ಯಾವುದು ಎಂದು ಪತ್ತೆಯಾಗುವವರೆಗೂ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಿಯಮ್ಮ ಅವರನ್ನು ಕೊಂದ ಘಟನೆಯ ನಂತರ, ಶಿವಗಂಗೆ ಬೆಟ್ಟದ ತಪ್ಪಲಿನ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳು ಒಂಬತ್ತು ಬೋನುಗಳನ್ನು ಇರಿಸಿದ್ದರು. ಅರಣ್ಯ ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕೆರೆಪಾಳ್ಯದಲ್ಲಿ ಕಂಡ ಚಿರತೆ 

ಸೋಂಪುರ ಹೋಬಳಿಯ ನರಸೀಪುರ ಪಂಚಾಯಿತಿ ವ್ಯಾಪ್ತಿಯ ಹೆಗ್ಗುಂದ ಬೆಟ್ಟಕ್ಕೆ ಹೊಂದಿಕೊಂಡಿರುವ ಕೆರೆಪಾಳ್ಯ ಗ್ರಾಮದ ಬಂಡೆಯ ಮೇಲೆ ಬುಧವಾರ ಸಂಜೆ ಮತ್ತೊಂದು ಚಿರತೆ ಕಾಣಿಸಿಕೊಂಡಿದೆ. ಗ್ರಾಮದ ವೆಂಕಟೇಶ್‌ ಎಂಬುವವರು ಹೊಲಕ್ಕೆ ಹೋಗಿ ಬರುವಾಗ ಬಂಡೆಯ ಮೇಲೆ ಚಿರತೆ ಮಲಗಿದ್ದನ್ನು ಕಂಡು ಮೊಬೈಲ್‌ನಲ್ಲಿ ಫೋಟೊ ಸೆರೆ ಹಿಡಿದಿದ್ದಾರೆ.

‘ನಮ್ಮ ಮನೆಯ ಬಳಿ ಏಳೆಂಟು ಬೀದಿ ನಾಯಿಗಳು ಇದ್ದವು. 15 ದಿನಗಳಿಂದ ಮೂರು ನಾಯಿಗಳು ಕಾಣುತ್ತಿಲ್ಲ. ಕೆಲ ದಿನಗಳ ಹಿಂದೆ ಮನೆಯ ಪಕ್ಕದಲ್ಲಿ ನಾಯಿಯೊಂದರ ರುಂಡ ಬಿದ್ದಿತ್ತು. ಚಿರತೆ ದಾಳಿಯಿಂದ ನಾಯಿಗಳು ಸತ್ತಿರಬಹುದು ಎಂಬ ಅನುಮಾನ ಮೂಡಿದೆ’ ಎಂದು ರಮೇಶ್ ಹೇಳಿದರು.

‘ಕಂಬಾಳು ಗೊಲ್ಲರಹಟ್ಟಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಮುಗಿದ ಮೇಲೆ ಈ ಭಾಗದಲ್ಲಿ ಬೋನು ಇಟ್ಟು ಚಿರತೆ ಹಿಡಿಯಲಾಗುವುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.