
ವೃಷಭಾವತಿ ನೀರಿನ ಪೈಪ್ ಲೈನ್ ಮಾಡದಂತೆ ಸಾರ್ವಜನಿಕರು ಪ್ರತಿಭಟಿಸಿದರು.
ದಾಬಸ್ ಪೇಟೆ: ವೃಷಭಾವತಿ ನೀರಿನ ಪೈಪ್‌ಲೈನ್ ಕಾಮಗಾರಿ ವಿರೋಧಿಸಿ ರಾಯರಪಾಳ್ಯ ಹಾಗೂ ಚನ್ನೋಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆ ಚನ್ನೋಹಳ್ಳಿ ಮಾರ್ಗವಾಗಿ ರಾಯರಪಾಳ್ಯ ಸಂಪರ್ಕಿಸುವ ರಸ್ತೆಬದಿಯಲ್ಲಿ ಕಾಮಗಾರಿ ನಡೆಸಲು ಬಂದವರನ್ನು ಸ್ಥಳೀಯರು ತಡೆದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಕೆಲವರನ್ನು ವಶಕ್ಕೆ ಪಡೆದರು.
20 ದಿನಗಳ ಹಿಂದೆ ಕಾಮಗಾರಿ ನಡೆಸಲು ಹೋದ ವೇಳೆಯಲ್ಲಿ ಕೆಲವರು ವಿರೋಧಿಸಿದ್ದರಿಂದ ಕೆಲಸ ನಿಲ್ಲಿಸಲಾಗಿತ್ತು. ಮತ್ತೆ ಕಾಮಗಾರಿ ಆರಂಭಿಸಲು ಹೋದಾಗ ಗ್ರಾಮಸ್ಥರು ಮತ್ತೆ ಪ್ರತಿಭಟನೆ ಮಾಡಿದ್ದಾರೆ.
‘ವೃಷಭಾವತಿ ನೀರು ಬಿಡಲು ರಾಯರಪಾಳ್ಯ, ಚನ್ನೋಹಳ್ಳಿ ಕೆರೆಗಳನ್ನು ಗುರುತಿಸಿದ್ದಾರೆ. ಈ ನೀರು ಕೆರೆಗೆ ಹರಿಸುವುದರಿಂದ ನೀರು ವಿಷಯುಕ್ತವಾಗಿ ದನಕರುಗಳಿಗೆ ಕುಡಿಯಲು, ಕೃಷಿ ಚಟುವಟಿಕೆಗೆ ಬಳಸಲು ಸಾಧ್ಯ ಆಗುವುದಿಲ್ಲ. ರಾಮದೇವರ ಬೆಟ್ಟ, ಸಿದ್ದರಬೆಟ್ಟದ ತಪ್ಪಲು ಇದ್ದು, ಇಲ್ಲಿನ ಪರಿಸರಕ್ಕೆ ಮಾರಕವಾಗುತ್ತದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.