ADVERTISEMENT

ಬೆಂಗಳೂರು | ₹ 3 ಕೋಟಿಗೆ ನಕಲಿ ಡೈಮಂಡ್: ನಾಲ್ವರು ಬಂಧನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 18:49 IST
Last Updated 18 ಮಾರ್ಚ್ 2024, 18:49 IST
ಉದ್ಯಮಿಯಿಂದ ₹15 ಕೋಟಿಗೆ ಬೇಡಿಕೆ: ಖಾಸಗಿ ಸುದ್ದಿ ವಾಹಿನಿ ಸಿಇಒ ಬಂಧನ
ಉದ್ಯಮಿಯಿಂದ ₹15 ಕೋಟಿಗೆ ಬೇಡಿಕೆ: ಖಾಸಗಿ ಸುದ್ದಿ ವಾಹಿನಿ ಸಿಇಒ ಬಂಧನ   

ಬೆಂಗಳೂರು: ನಕಲಿ ಡೈಮಂಡ್ ಹರಳುಗಳನ್ನು ಅಸಲಿ ಎಂಬುದಾಗಿ ಬಿಂಬಿಸಿ ₹3 ಕೋಟಿಗೆ ಮಾರಾಟ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಕಲಿ ಡೈಮಂಡ್ ಮಾರಾಟದ ಬಗ್ಗೆ ಹೈದರಾಬಾದ್‌ನ ಲಕ್ಷ್ಮಿನಾರಾಯಣ ಅವರು ದೂರು ನೀಡಿದ್ದರು. ಆರೋಪಿಗಳಾದ ರವಿ, ನವೀನ್ ಕುಮಾರ್, ಅಹಮದ್ ಹಾಗೂ ಅಬ್ದುಲ್ ದಸ್ತಗಿರ್ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ನಕಲಿ ಡೈಮಂಡ್ ಹರಳುಗಳು, ಪರೀಕ್ಷಾ ಯಂತ್ರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರಿಗೆ ಮಾರ್ಚ್‌ 14ರಂದು ಕರೆ ಮಾಡಿದ್ದ ಆರೋಪಿಗಳು, ‘ನಮ್ಮ ಬಳಿ ಡೈಮಂಡ್ ಹರಳುಗಳಿವೆ. ಕಡಿಮೆ ಬೆಲೆಗೆ ಮಾರುತ್ತೇವೆ. ಬಂದು ಭೇಟಿಯಾಗಿ’ ಎಂದಿದ್ದರು. ಅವರ ಮಾತು ನಂಬಿದ್ದ ದೂರುದಾರ, ವಿಮಾನ ನಿಲ್ದಾಣ ಬಳಿಯ ಪಂಚತಾರಾ ಹೋಟೆಲ್‌ಗೆ ಮಾರ್ಚ್ 15ರಂದು ಬಂದಿದ್ದರು’ ಎಂದರು.

ADVERTISEMENT

‘ಹೋಟೆಲ್‌ ಕೊಠಡಿಯಲ್ಲಿ ಸ್ವಾಮೀಜಿಯೊಬ್ಬರು ಉಳಿದುಕೊಂಡಿದ್ದರು. ದೂರುದಾರ ಅವರ ಆಶೀರ್ವಾದ ಪಡೆದಿದ್ದರು. ಅದೇ ಸ್ಥಳಕ್ಕೆ ಆರೋಪಿಗಳು ಬಂದಿದ್ದರು. ಅವರು ಸಹ ಸ್ವಾಮೀಜಿ ಆಶೀರ್ವಾದ ಪಡೆದಿದ್ದರು. ನಂತರ, ದೂರುದಾರ ಹಾಗೂ ಆರೋಪಿಗಳು, ಕೊಠಡಿಯಿಂದ ಹೊರಬಂದು ಹೋಟೆಲ್‌ನ ಉದ್ಯಾನದಲ್ಲಿ ಮಾತುಕತೆ ಮುಂದುವರಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಡೈಮಂಡ್ ಹರುಳುಗಳು ಇದ್ದ ಬಾಕ್ಸ್ ತೋರಿಸಿದ್ದ ಆರೋಪಿಗಳು, ‘ಇವುಗಳ ಮಾರುಕಟ್ಟೆ ಮೌಲ್ಯ ₹ 10 ಕೋಟಿ. ಇವುಗಳನ್ನು ಕೇವಲ ₹ 3 ಕೋಟಿಗೆ ಕೊಡುತ್ತೇವೆ’ ಎಂದಿದ್ದರು. ದೂರುದಾರ ಹರಳುಗಳನ್ನು ಪರೀಕ್ಷಿಸಿದಾಗ ನಕಲಿ ಎಂಬ ಅನುಮಾನ ಬಂದಿತ್ತು. ಈ ಬಗ್ಗೆ ಠಾಣೆಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.