
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜ.2ರಿಂದ ಜ.4ರವರೆಗೆ ‘ದಲಿತ ಸಾಹಿತ್ಯ ಮತ್ತು ಚಳವಳಿ–50’ ಶೀರ್ಷಿಕೆಯಡಿ ಅಧ್ಯಯನ ಶಿಬಿರ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಈ ಬಗ್ಗೆ ಮಾಹಿತಿ ನೀಡಿದರು.
‘ಈ ಶಿಬಿರವು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ವೆಂಕಟಗಿರಿಗೌಡ ಸಭಾಂಗಣದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು 250 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 60 ಮಂದಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ನಡೆದ ದಲಿತ ಚಳವಳಿಯ ಪರಿಣಾಮ ಮತ್ತು ಅದರ ಪ್ರಭಾವವನ್ನು ಪರಿಚಯಿಸಲಾಗುತ್ತದೆ’ ಎಂದು ಹೇಳಿದರು.
‘ಜ.2ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕವಿ ಹಾಗೂ ಹೋರಾಟಗಾರ ಎಚ್. ಗೋವಿಂದಯ್ಯ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ. ಅಧ್ಯಕ್ಷತೆ ವಹಿಸುತ್ತಾರೆ. ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರು ಈ ಶಿಬಿರದ ನಿರ್ದೇಶಕರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
‘ದಲಿತ ಚಳವಳಿಯ ಹುಟ್ಟು, ಬೂಸಾ ಚಳವಳಿ, ದಲಿತ ಆತ್ಮಕತೆಗಳು, ದಲಿತ ಕಾವ್ಯ, ದಲಿತ ಸಾಹಿತ್ಯ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 14 ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ವಿಷಯ ತಜ್ಞರು ವಿಚಾರ ಮಂಡಿಸುತ್ತಾರೆ. ಶಿಬಿರಾರ್ಥಿಗಳ ಜತೆಗೆ ಸಾರ್ವಜನಿಕರೂ ಪಾಲ್ಗೊಳ್ಳಬಹುದು’ ಎಂದು ಹೇಳಿದರು.
ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್., ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಡಿ. ಡೊಮಿನಿಕ್ ಹಾಗೂ ಅಕಾಡೆಮಿ ಸದಸ್ಯರೂ ಆಗಿರುವ ಶಿಬಿರದ ಸಂಚಾಲಕ ರವಿಕುಮಾರ್ ಬಾಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.