ADVERTISEMENT

ದಲಿತ ಸಾಹಿತಿಯೆಂಬ ‘ಕ್ರೆಡಿಟ್’ ಅಗತ್ಯವಿಲ್ಲ: ಎಲ್. ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 17:53 IST
Last Updated 20 ಅಕ್ಟೋಬರ್ 2025, 17:53 IST
ಕಾರ್ಯಕ್ರಮದಲ್ಲಿ ಎಲ್. ಹನುಮಂತಯ್ಯ ಮತ್ತು ಅಗ್ರಹಾರ ಕೃಷ್ಣಮೂರ್ತಿ ಸಮಾಲೋಚನೆ ನಡೆಸಿದರು. ಕವಿ ಸುಬ್ಬು ಹೊಲೆಯಾರ್, ಎಚ್. ಲಕ್ಷ್ಮೀನಾರಾಯಣಸ್ವಾಮಿ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಎಲ್. ಹನುಮಂತಯ್ಯ ಮತ್ತು ಅಗ್ರಹಾರ ಕೃಷ್ಣಮೂರ್ತಿ ಸಮಾಲೋಚನೆ ನಡೆಸಿದರು. ಕವಿ ಸುಬ್ಬು ಹೊಲೆಯಾರ್, ಎಚ್. ಲಕ್ಷ್ಮೀನಾರಾಯಣಸ್ವಾಮಿ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಾಹಿತ್ಯ ಕ್ಷೇತ್ರದಲ್ಲಿ ದಲಿತ ಎಂಬ ‘ಕ್ರೆಡಿಟ್’ ಅಗತ್ಯವಿಲ್ಲ. ಸಾಹಿತಿ ಎನ್ನುವುದು ಹೆಮ್ಮೆಯ ವಿಚಾರವಾಗಬೇಕೆ ಹೊರತು, ದಲಿತ ಸಾಹಿತಿ ಎನ್ನುವುದು ಮುಖ್ಯವಾಗಬಾರದು’ ಎಂದು ಕವಿ ಎಲ್. ಹನುಮಂತಯ್ಯ ಹೇಳಿದರು.

ಶೂದ್ರ ಪ್ರತಿಷ್ಠಾನ ಮತ್ತು ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರ ‘ಒಳಮೀಸಲಾತಿ ಮತ್ತು ಇತರೆ ಲೇಖನಗಳು’, ‘ತೊಗಲ ಚೀಲದ ಕರ್ಣ’ ಹಾಗೂ ‘ನೂಲ ಏಣಿಯ ನಡಿಗೆ’ ಪುಸ್ತಕಗಳನ್ನು ಜನಾರ್ಪಣೆ ಮಾಡಿ, ಮಾತನಾಡಿದರು.

‘ಸಾಹಿತ್ಯ ಕ್ಷೇತ್ರದಲ್ಲಿ ದಲಿತ ಎಂದು ಗುರುತಿಸಿಕೊಳ್ಳುವುದು ಹೆಮ್ಮೆಯಾಗಬಾರದು. ಆ ಮೀಸಲಾತಿಯನ್ನು ನಾವು ಕೇಳಿದವರಲ್ಲ, ಅಗತ್ಯವೂ ಇಲ್ಲ. ಮೊದಲು ನಾವು ಸಾಹಿತಿ ಅಥವಾ ಕವಿಯಾದರೆ, ಆಮೇಲೆ ಯಾವ ಸಾಹಿತಿ, ಕವಿ ಎನ್ನುವ ಪ್ರಶ್ನೆ ಬರಲಿದೆ. ಕವಿಯೇ ಅಲ್ಲದಿದ್ದರೂ ದಲಿತನಾದ್ದರಿಂದ ಮೀಸಲಾತಿ ನೀಡಿ ಎನ್ನುವುದು ಯೋಗ್ಯವಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ದಲಿತರಲ್ಲದವರೂ ದಲಿತ ಬದುಕಿನ ಚಿತ್ರಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಬರೆದಿದ್ದಾರೆ. ಅದು ಕನ್ನಡ ಸಾಹಿತ್ಯದ ಹಿರಿಮೆ. ಕುವೆಂಪು ಅವರ ಕೃತಿಗಳಲ್ಲಿನ ದಲಿತ ಪಾತ್ರಗಳನ್ನು ಅಧ್ಯಯನ ಮಾಡಿದರೆ, ದಲಿತ ಲೇಖಕನಿಗೆ ಸಿಗದಿರುವ ಅನೇಕ ಒಳನೋಟಗಳು ಅವರ ಕಾದಂಬರಿಗಳಲ್ಲಿ ಸಿಗುತ್ತವೆ. ನನ್ನ ಪ್ರಕಾರ ಮೊದಲ ದಲಿತ ಬರಹಗಾರ ಕುವೆಂಪು. ಅವರಿಗಿಂತ ಹಿಂದೆ ಹೋದರೆ ಮಾದಾರ ಚನ್ನಯ್ಯ ದಲಿತ ಬರಹಗಾರ. ಅವರನ್ನೂ ಮೀರಿದ ದಲಿತ ಬರಹಗಾರ ಬಸವಣ್ಣ’ ಎಂದರು.  

‘ಒಳಮೀಸಲಾತಿ ಜಾರಿಯಾಗಿದ್ದು, ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಈ ಒಳಮೀಸಲಾತಿಯ ಹೊಂಡದಲ್ಲಿಯೇ ಬಿದ್ದು ಒದ್ದಾಡಬೇಕೆ ಅಥವಾ ಅದರಿಂದ ನೆಗೆದು, ದಡದ ಮೇಲೆ ನಿಂತು ವಿಸ್ತಾರವಾದ ಕಣ್ಣನ್ನು ತೆರೆದುಕೊಳ್ಳಬೇಕೆ ಎಂಬ ಪ್ರಶ್ನೆಯನ್ನು ಯುವಕರ ಮುಂದೆ ಇಡಬೇಕಿದೆ. ಒಳಮೀಸಲಾತಿ ಸಣ್ಣ ಕ್ಷೇತ್ರವಾಗಿದ್ದು, ಇದು ಜಾರಿಯಾದ ಕಾಲಮಾನಕ್ಕೆ ಸರಿಯಾಗಿ ಖಾಸಗಿ ಕ್ಷೇತ್ರ ವಿಸ್ತರಿಸಿಕೊಂಡಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಮ್ಮ ಪ್ರವೇಶ ಮತ್ತು ಅಲ್ಲಿ ನಮ್ಮ ಪಾಲನ್ನು ಪಡೆಯುವುದು ಹೇಗೆ ಎಂಬ ಆಲೋಚನೆ ಮಾಡುವುದೇ ಒಳಮೀಸಲಾತಿಯ ನಿಜವಾದ ಮುನ್ನೋಟ’ ಎಂದು ಹೇಳಿದರು. 

ವಿಮರ್ಶಕ ಅಗ್ರಹಾರ ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃತಿಗಳ ಬಗ್ಗೆ ಕುಮಾರ್ ಇಂದ್ರಬೆಟ್ಟ, ಶಿವಣ್ಣ ಕೆಂಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.