ADVERTISEMENT

ದಲಿತ ಯುವಕರಿಗೆ ಅಧಿಕಾರ ಸಿಗಬೇಕು: ಕೋಡಿಹಳ್ಳಿ ಚಂದ್ರಶೇಖರ್‌

‘ಬಹುಜನರ ಏಕತಾ ದಿನ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 14:33 IST
Last Updated 9 ಜೂನ್ 2025, 14:33 IST
ಕೋಡಿಹಳ್ಳಿ ಚಂದ್ರಶೇಖರ್‌
ಕೋಡಿಹಳ್ಳಿ ಚಂದ್ರಶೇಖರ್‌   

ಬೆಂಗಳೂರು: ‘ಹೋರಾಟ, ಪ್ರತಿಭಟನೆ ಮಾಡಿ, ಚಿತ್ರಾನ್ನ ತಿಂದು, ಅಂಬೇಡ್ಕರ್‌ ಜಿಂದಾಬಾದ್‌ ಎಂದು ಹೇಳಿಕೊಂಡು ಬಂದಿದ್ದು ಸಾಕು. ದಲಿತ ಯುವಕರು ಒಂದು ಹಂತಕ್ಕೆ ಬಂದಿದ್ದು, ಅವರಿಗೆ ಅಧಿಕಾರ ಸಿಗಬೇಕು’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ರಿಪ‍ಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ – ಕರ್ನಾಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ‘ಬಹುಜನರ ಏಕತಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್, ಬಿಜೆಪಿಗೆ ನಮ್ಮ ಮತವಿಲ್ಲ. ನಮ್ಮ ಮತ ಪ್ರಗತಿಗೆ ಎಂದು ಎಲ್ಲ ಒಕ್ಕೂಟಗಳು ಶಪಥ ಮಾಡಬೇಕು. ಈಗಿರುವುದು ರಾಜಕಾರಣ, ರಾಜಕೀಯವಲ್ಲ. ದುಡ್ಡಿನ ಆಸೆಗೆ ನಾವು ಕಾಂಗ್ರೆಸ್, ಬಿಜೆಪಿಗೆ ಮತ ಹಾಕಬಾರದು. ಸಂವಿಧಾನದ ಆಶಯದಂತೆ ನಾವೆಲ್ಲ ಮರ್ಯಾದಸ್ಥರಾಗಿ, ಅಂಬೇಡ್ಕರ್‌ ಆಶಯದಂತೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಧಿಕಾರ ನಡೆಸಬೇಕು. ದಲಿತರು, ರೈತರು ನಮ್ಮ ರಾಜ್ಯವನ್ನು ನಾವೇ ನಿರ್ಮಿಸಿಕೊಳ್ಳಬೇಕು’ ಎಂದರು.

ADVERTISEMENT

ರಿಪ‍ಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ – ಕರ್ನಾಟಕ ಘಟಕದ ಅಧ್ಯಕ್ಷ ಆರ್‌. ಮೋಹನ್ ರಾಜ್ ಮಾತನಾಡಿ, ‘ಕೃಷ್ಣಪ್ಪ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಕಡಿಮೆ ಜನರು ಬಂದಿರುವುದು ಬೇಸರ ತಂದಿದೆ. ನಮ್ಮ ಕಾರ್ಯಕರ್ತರೆಲ್ಲರೂ ಬರಬೇಕಿತ್ತು’ ಎಂದರು.

‘ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹಿಂದಿಯನ್ನು ಮತ್ತೆ ಹೇರುವ ಮೂಲಕ ಮನುವಾದ, ಬ್ರಾಹ್ಮಣ್ಯವನ್ನು ಹೇರಲು ಹೊರಟಿದೆ’ ಎಂದು ಹೇಳಿದರು.

‘ಮುಸ್ಲಿಮರು, ದಲಿತರಲ್ಲಿ ಒಗ್ಗಟ್ಟಿಲ್ಲ. ನಮ್ಮ ಸಮುದಾಯದ ನಾಯಕರನ್ನು ಒಪ್ಪದೆ, ಬೇರೆಯವರನ್ನು ಒಪ್ಪುತ್ತಾರೆ. ಅವರು ನಮ್ಮನ್ನು ಒಂದಾಗಿ ಬೆಳೆಯಲು ಬಿಡಲೇ ಇಲ್ಲ. ನಮ್ಮವರೆಲ್ಲ ಕಾಂಗ್ರೆಸ್‌ ಹಿಂದೆ ಹೋಗಿ, ಹಿಂದೆಯೇ ಉಳಿದರು. ಬಿಜೆಪಿಯವರು ಹಿಂದೂ ಎಂದು ಎಲ್ಲರಿಂದ ಮತ ಪಡೆದು, ಹೆಗಡೆ ಹೆಸರಿನವರನ್ನು ಮಾತ್ರ ಬೆಳೆಸಿದರು’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ದೂರಿದರು.

‘ಒಂದು ದೇಶ, ಒಂದು ಕಾನೂನು ಎನ್ನುವವರು ಮುಂದೆ ಒಂದು ಜಾತಿ ಎನ್ನುತ್ತಾರೆ. ಮೀಸಲಾತಿ ತೆಗೆದುಹಾಕಿ ರ‍್ಯಾಂಕ್ ಬಂದವರಿಗೆ ಮಾತ್ರ ಕೆಲಸ ಸಿಗುತ್ತದೆ. ದಲಿತರು, ಮುಸ್ಲಿಮರಿಗೆ ಏನೂ ಸಿಗುವುದಿಲ್ಲ’ ಎಂದರು.

ಆರ್‌ಪಿಐ ರಾಜ್ಯ ಘಟಕದ ಉಪಾಧ್ಯಕ್ಷೆ ಸ್ವಪ್ನಾ, ರಾಜ್ಯ ಸಂಚಾಲಕ ಕೆ.ಎಂ. ಶ್ರೀನಿವಾಸ್, ರಾಜ್ಯ ಕಾರ್ಯದರ್ಶಿ ಶಂಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.