
ದರ್ಶನ್ ಹಾಗೂ ಇತರ ಆರೋಪಿಗಳು
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ, ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ಇರಿಸಿರುವ ಬ್ಯಾರಕ್‌ನಲ್ಲಿ ಇತರೆ ಆರೋಪಿಗಳ ಜತೆಗೆ ರಂಪಾಟ ಮಾಡಿಕೊಂಡಿದ್ದಾರೆ ಎನ್ನುವ ವಂದತಿ ಹಬ್ಬಿದೆ. ಈ ಘಟನೆಯನ್ನು ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿದಂತೆ ಏಳು ಮಂದಿಯನ್ನು ಆಗಸ್ಟ್ 14ರಂದು ಪೊಲೀಸರು ಬಂಧಿಸಿದ್ದರು.
ದರ್ಶನ್, ಅವರ ವ್ಯವಸ್ಥಾಪಕ ಆರ್.ನಾಗರಾಜ್, ಕಾರು ಚಾಲಕ ಲಕ್ಷ್ಮಣ್, ಉದ್ಯಮಿ ಪ್ರದೂಷ್ ರಾವ್ ಹಾಗೂ ಚಿತ್ರದುರ್ಗದ ಆಟೊ ಚಾಲಕರಾದ ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ ಅವರನ್ನು ಜೈಲಿನ ಒಂದೇ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ದರ್ಶನ್ ಅವರು ಆರ್.ನಾಗರಾಜ್ ಹೊರತು ಪಡಿಸಿ ಉಳಿದವರ ಜತೆಗೆ ಗಲಾಟೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕಾಲಿನ ಒದ್ದರೇ ದರ್ಶನ್? ದರ್ಶನ್ ಅವರು ನಟಿಸಿರುವ ಡೆವಿಲ್ ಚಿತ್ರವು ಡಿಸೆಂಬರ್ 11ರಂದು ಬಿಡುಗಡೆ ಆಗುತ್ತಿದೆ. ಕೆಲವು ದಿನಗಳಿಂದ ಬೆಳಿಗ್ಗೆ ಬೇಗನೇ ಎಳುತ್ತಿದ್ದು, ಇತರೆ ಆರೋಪಿಗಳನ್ನು ಕಾಲಿನಿಂದ ಒದ್ದು ಎಬ್ಬಿಸುತ್ತಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
‘ಎರಡು ದಿನದ ಹಿಂದೆ ಜಗದೀಶ್ ಮತ್ತು ದರ್ಶನ್ ನಡುವೆ ದೊಡ್ಡ ಜಗಳ ನಡೆದಿದೆ. ಇಬ್ಬರ ಜಗಳ ಜೋರಾಗುತ್ತಿದ್ದಂತೆ ಜೈಲು ಸಿಬ್ಬಂದಿ ಹಾಗೂ ಇತರೆ ಕೈದಿಗಳು ಜಗಳ ಬಿಡಿಸಿದ್ದಾರೆ. ಘಟನೆ ನಡೆದ ಮೇಲೆ ಅನುಕುಮಾರ್ ಹಾಗೂ ಜಗದೀಶ್ ಬೇರೆ ಬ್ಯಾರಕ್‌ಗೆ ವರ್ಗಾವಣೆ ಮಾಡಿ. ಇಲ್ಲವೇ ಚಿತ್ರದುರ್ಗದ ಜೈಲಿಗೆ ಸ್ಥಳಾಂತರ ಮಾಡಿ ಎಂಬುದಾಗಿ ಜೈಲಿನ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.
ಪರಿಶೀಲನೆ ನಡೆಸಲು ಸೂಚನೆ
‘ದರ್ಶನ್ ಅವರನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲಿ ಗಲಾಟೆ ಆಗಿರುವ ಮಾಹಿತಿ ಸಿಕ್ಕಿಲ. ಗಲಾಟೆಯ ವಂದತಿ ಹಬ್ಬಿರುವ ಕಾರಣಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ. ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಜೈಲಿನಲ್ಲಿ ಅಕ್ರಮ ತಡೆಗಟ್ಟಲು ಹಾಗೂ ಸುಧಾರಣೆ ತರಲು ಮೊದಲ ಬಾರಿಗೆ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರನ್ನು ಸರ್ಕಾರ ನೇಮಿಸಿದೆ.
‘ಕಳೆದ ಕೆಲವು ದಿನಗಳಿಂದ ಜೈಲಿನ ವಿವಿಧ ಬ್ಯಾರಕ್‌ನಲ್ಲಿ ಪರಿಶೀಲನೆ ನಡೆಸಲಾಗಿತ್ತು. ಬ್ಯಾರಕ್‌ನಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ದರ್ಶನ್ ಬ್ಯಾರಕ್‌ನಲ್ಲೂ ಪರಿಶೀಲನೆ ನಡೆಸಲಾಗಿತ್ತು. ಆ ರೀತಿಯ ಘಟನೆ ನಡೆದಿದ್ದರೆ, ಇತರೆ ಆರೋಪಿಗಳು ಮಾಹಿತಿ ನೀಡುತ್ತಿದ್ದರು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.