ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯ ನೀಡದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಕ್ವಾರಂಟೈನ್ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರ ಮಾಡುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಲಯದ ಸೂಚನೆ ಮೇರೆಗೆ ಪ್ರಾಧಿಕಾರದ ಬೆಂಗಳೂರು ನಗರ ಜಿಲ್ಲಾ ಸದಸ್ಯ ಕಾರ್ಯದರ್ಶಿ ಬಿ.ವರದರಾಜ್ ಮತ್ತು ತಂಡ ಮಂಗಳವಾರ ಮಧ್ಯಾಹ್ನ ದರ್ಶನ್‌ನನ್ನು ಇರಿಸಲಾಗಿರುವ ಕ್ವಾರಂಟೈನ್ ಸೆಲ್‌ಗೆ ತೆರಳಿ, ನೀಡಿರುವ ಸೌಲಭ್ಯಗಳ ಬಗ್ಗೆ ತಪಾಸಣೆ ನಡೆಸಿತು.
ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸಲಾಗಿದೆಯೇ ? ಎಂದು ಜೈಲು ಅಧಿಕಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ದರ್ಶನ್, ‘ಇಲ್ಲ. ತುಂಬ ಹಿಂಸೆ ಆಗುತ್ತಿದೆ. ನೆಪಕ್ಕಷ್ಟೇ ಸೌಲಭ್ಯ ನೀಡಿದ್ದಾರೆ’ ಎಂದು ತಾವು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ವರದರಾಜ್ ತಂಡದ ಬಳಿ ಹೇಳಿಕೊಂಡರು ಎಂದು ಗೊತ್ತಾಗಿದೆ.
‘ಕೈಗೆ ಫಂಗಸ್ ಬಂದಿದೆ. ಬಿಸಿಲು ನೋಡಿ ಹಲವು ದಿನಗಳೇ ಕಳೆದಿವೆ. ವಾಕಿಂಗ್ ಮಾಡಲು ಅವಕಾಶ ನೀಡುತ್ತಿಲ್ಲ’ ಎಂದು ದರ್ಶನ್ ಆರೋಪಿಸಿದ್ದರು. ನ್ಯಾಯಾಲಯದ ಆದೇಶ ಬಳಿಕ ಜೈಲಾಧಿಕಾರಿಗಳು ಸೀಮಿತ ಸ್ಥಳದಲ್ಲಿ ವಾಕಿಂಗ್ ಮಾಡಲು ಅನುವು ಮಾಡಿಕೊಟ್ಟಿದ್ದರು.
ಜೈಲಿನ ಕೈಪಿಡಿಯಂತೆ ದರ್ಶನ್‌ಗೆ ನೀಡಲಾಗಿರುವ ಸೌಲಭ್ಯಗಳೇನು ? ದರ್ಶನ್‌ಗೆ ಫಂಗಸ್ ಹಾಗೂ ಬೆನ್ನು ನೋವು ಹಿನ್ನೆಲೆಯಲ್ಲಿ ಜೈಲಿನ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆ, ಬಂಧನವಾಗಿ ಎರಡು ತಿಂಗಳು ಕಳೆದರೂ ಕ್ವಾರಂಟೈನ್ ಸೆಲ್‌ನಲ್ಲಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ವರದರಾಜ್ ಅವರು ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ ಅವರೊಂದಿಗೆ ಸುಮಾರು ಎರಡು ತಾಸು ಸಮಾಲೋಚನೆ ನಡೆಸಿ ನಿರ್ಗಮಿಸಿದರು.
ಒಂದೆರಡು ದಿನಗಳಲ್ಲಿ ಸೇವಾ ಪ್ರಾಧಿಕಾರದ ಅಧಿಕಾರಿಗಳು ಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಜೈಲಿಗೆ ತೆರಳಿ ವಸ್ತುಸ್ಥಿತಿ ಪರಿಶೀಲಿಸಿ ಅಕ್ಟೋಬರ್ 18ರೊಳಗೆ ವರದಿ ನೀಡಬೇಕೆಂದು 57ನೇ ಸಿಸಿಎಚ್ ನ್ಯಾಯಾಲಯ ಗಡುವು ನೀಡಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.