ಬೆಂಗಳೂರು: ‘ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ಕಾರಾಗೃಹದ ಕೈಪಿಡಿಯಂತೆಯೇ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜೈಲಿನಲ್ಲಿ ಮಲಗಲು ಪಲ್ಲಂಗ ಬೇಕು ಎಂದರೆ ಹೇಗೆ ಕೊಡಲು ಸಾಧ್ಯ...’
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಇಲ್ಲಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮಂಗಳವಾರ ನಡೆಯಿತು. ವಿಚಾರಣೆಯ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ಮೇಲಿನಂತೆ ವಾದ ಮುಂದಿಟ್ಟರು.
‘ನ್ಯಾಯಾಲಯದ ಸೂಚನೆ ಇದ್ದರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಾಸಿಗೆ, ದಿಂಬಿನಂತಹ ಕನಿಷ್ಠ ಸೌಲಭ್ಯವನ್ನೂ ನೀಡುತ್ತಿಲ್ಲ’ ಎಂದು ಆರೋಪಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಾಲಯವು ಅಕ್ಟೋಬರ್ 9ಕ್ಕೆ ಆದೇಶ ಕಾಯ್ದಿರಿಸಿತು.
ಇದಕ್ಕೂ ಮೊದಲು ಎಸ್‌ಪಿಪಿ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸುನಿಲ್ ಅವರು ನ್ಯಾಯಾಧೀಶರ ಎದುರು ವಾದ–ಪ್ರತಿವಾದ ಮಂಡಿಸಿದರು.
‘ಆರೋಪಿಗೆ ಬೆಳಿಗ್ಗೆ ಹಾಗೂ ಸಂಜೆ ತಲಾ ಒಂದು ತಾಸು ಬ್ಯಾರಕ್ ಎದುರು ವಾಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಆರೋಪಿ ಹೊರಗಡೆ ಹೋಗಬೇಕು, ಇದೇ ಬ್ಯಾರಕ್‌ನಲ್ಲಿಯೇ ಇರಬೇಕು ಎಂದರೆ ಆಗುವುದಿಲ್ಲ. ಅವರಿಗೆ ಬಿಸಿಲು ಬರುತ್ತಿಲ್ಲ ಎಂದರೆ ಜೈಲಧಿಕಾರಿಗಳನ್ನು ಹೊಣೆ ಮಾಡಲು ಸಾಧ್ಯವೇ? ಮೂಲಭೂತ ಹಕ್ಕು ಇರಬಹುದು. ಆದರೆ, ವಿಚಾರಣಾಧೀನ ಕೈದಿ ಜೈಲಿನ ನಿಯಮಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ’ ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ದರ್ಶನ್ ಪರ ವಕೀಲ ಸುನಿಲ್ ಪ್ರತಿವಾದ ಮಂಡಿಸಿ, ‘ನ್ಯಾಯಾಲಯ ಈ ಹಿಂದೆ ನೀಡಿದ್ದ ಸೂಚನೆಗಳನ್ನು ಗಾಳಿಗೆ ತೂರಲಾಗಿದೆ. ನ್ಯಾಯಾಲಯ ನೀಡಿದ್ದ ಸೂಚನೆಗಳು ಜೈಲಿನ ಅಧಿಕಾರಿಗಳಿಗೆ ಅರ್ಥವಾದಂತೆ ಕಾಣಿಸುತ್ತಿಲ್ಲ’ ಎಂದು ಹೇಳಿದರು.
‘ನ್ಯಾಯಾಂಗ ಬಂಧನಕ್ಕೆ ಒಳಗಾದ ದಿನದಿಂದಲೂ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿಯೇ ಇಡಲಾಗಿದೆ. ಜೈಲಿನ ಕೈಪಿಡಿಯಲ್ಲಿ ಕ್ವಾರಂಟೈನ್ ಎಂಬ ಪದವಿದ್ದರೆ ನಾವು ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
‘ಆರೋಪಿಗಾಗಿ ಚಿನ್ನದ ಮಂಚವನ್ನು ಕೊಡಿ ಎಂಬುದಾಗಿ ನಾವು ಕೇಳಿಲ್ಲ. ಅವರ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ವ್ಯವಸ್ಥೆಗಳನ್ನು ಕಲ್ಪಿಸುವಂತೆ ಕೋರಲಾಗಿದೆ. ಯಾವ ಕೈದಿಗೆ, ಯಾವ ಸೆಲ್ ನೀಡಬೇಕೆಂದು ಜೈಲಿನ ಕೈಪಿಡಿಯಲ್ಲಿದೆ. ಆದರೆ, ಜೈಲಧಿಕಾರಿಗಳು ಯಾವುದೇ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ’ ಎಂದು ನ್ಯಾಯಾಧೀಶರ ಗಮನ ಸೆಳೆದರು.
‘ದರ್ಶನ್ ಅವರಿಗಾಗಿಯೇ ಜೈಲಿನಲ್ಲಿ ಪ್ರತ್ಯೇಕ ರಿಜಿಸ್ಟರ್ ಇರಿಸಲಾಗಿದೆ. ಅತ್ಯಾಚಾರ ಪ್ರಕರಣದ ಆರೋಪಿಗೆ ನೀಡಿರುವಂತಹ ಸವಲತ್ತುಗಳನ್ನು ದರ್ಶನ್ ಅವರಿಗೆ ನೀಡಿಲ್ಲ’ ಎಂದು ಸುನಿಲ್ ಹೇಳಿದರು.
ಇದಕ್ಕೆ ಪ್ರತಿ ವಾದ ಮಂಡಿಸಿದ ಪ್ರಸನ್ನಕುಮಾರ್, ‘ಕ್ವಾರಂಟೈನ್ ಸೆಲ್ ಸಹ ಕಾರಾಗೃಹದ ಭಾಗವೇ. 1964ರ ಜೈಲು ನಿಯಮಗಳ ಅಡಿ ಕೈದಿಯನ್ನು ಹೇಗೆ ನಡೆಸಿಕೊಳ್ಳಬೇಕು, ಯಾವ ಬ್ಯಾರಕ್‌ಗೆ ಯಾವಾಗ ಸ್ಥಳಾಂತರಿಸಬೇಕು ಎಂಬುದರ ಕುರಿತು ಉಲ್ಲೇಖವಿದೆ. ಭದ್ರತಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಆರೋಪಿಯನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಇದೇ ಜೈಲಿನಲ್ಲಿ ದರ್ಶನ್ ಅವರು ಈ ಹಿಂದೆ ನ್ಯಾಯಾಂಗ ಬಂಧನದಲ್ಲಿ ಇದ್ದರು. ಆಗ ಅವರು ಸೌಲಭ್ಯವನ್ನು ದುರುಪಯೋಗ ಮಾಡಿಕೊಂಡಿದ್ದರು’ ಎಂದು ಪ್ರಸ್ತಾಪಿಸಿದರು.
ದರ್ಶನ್‌ಗೆ ಸೌಲಭ್ಯ: ನ್ಯಾಯಾಲಯಕ್ಕೆ ವರದಿ
ಸೆ.25ರಂದು ನಡೆದಿದ್ದ ವಿಚಾರಣೆ ವೇಳೆ ಜೈಲು ಸಿಬ್ಬಂದಿ ವಿರುದ್ಧ ದರ್ಶನ್ ಪರ ವಕೀಲರು ಆರೋಪ ಮಾಡಿದ್ದರು. ಮುಂದಿನ ವಿಚಾರಣೆ ವೇಳೆ ಜೈಲಿನ ಮುಖ್ಯ ಅಧೀಕ್ಷಕರು ಖುದ್ದು ಹಾಜರಿರಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದರು. ಮಂಗಳವಾರ ಪ್ರಕರಣದ ವಿಚಾರಣೆಗೂ ಮುನ್ನ ಕಾರಾಗೃಹದ ಅಧೀಕ್ಷಕ ಸುರೇಶ್ ಅವರು ಖುದ್ದು ಹಾಜರಾಗಿ ಜೈಲಿನಲ್ಲಿ ದರ್ಶನ್‌ಗೆ ಕಲ್ಪಿಸಿರುವ ಸೌಲಭ್ಯಗಳ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.