ಬೆಂಗಳೂರು: ‘ಶ್ರೀಸಾಮಾನ್ಯರ ನುಡಿಗಟ್ಟಿನಲ್ಲಿ ಭಕ್ತಿ ಮತ್ತು ಭಗವಂತನ ಪಾರಮ್ಯವನ್ನು ಸಾರಿದ್ದು ದಾಸಸಾಹಿತ್ಯದ ಹಿರಿಮೆ. ಇಂತಹ ದಾಸಸಾಹಿತ್ಯದ 65 ಸಂಪುಟಗಳನ್ನು ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ಪ್ರಕಟಿಸಲಾಗುತ್ತಿದೆ. ಈಗಾಗಲೇ ಅರವತ್ತಕ್ಕೂ ಹೆಚ್ಚು ಸಂಪುಟಗಳು ಬಿಡುಗಡೆಗೆ ಸಿದ್ಧವಾಗಿವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಕಾಗಿನೆಲೆ ಮಹಾಸಂಸ್ಥಾನ ಪೀಠವು ಕೇತೋಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಕನಕದಾಸ ಸಾಹಿತ್ಯದ ವೈಚಾರಿಕ ಅನುಸಂಧಾನದ ‘ತಲ್ಲಣಿಸದಿರು ಮನವೇ’ ವಿಚಾರ ಸಂಕಿರಣಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
‘ಕನಕದಾಸರು ವೈಚಾರಿಕವಾಗಿ ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ, ವ್ಯಾಸರಾಯರ ಶಿಷ್ಯರಾಗಿ ಸಾಧನೆ ಮಾಡಿದವರು. ಭಾಷೆಯ ಬಳಕೆಯಲ್ಲಿ ದಾಸಸಾಹಿತ್ಯವು ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡಿದೆ. ಇದರಿಂದಾಗಿ ಸಾಮಾಜಿಕ ಪರಿವರ್ತನೆ ಸಾಧ್ಯವಾಯಿತು’ ಎಂದು ಅವರು ಬಣ್ಣಿಸಿದರು.
‘ಉತ್ತರ ಕರ್ನಾಟಕವು ಮೂಲತಃ ಭಕ್ತಿಕವಿಗಳ, ಸಂತರ, ಯೋಗಿಗಳ ಮತ್ತು ಅವಧೂತರ ನೆಲ. ಪಂಪ, ರನ್ನ, ಬಸವಣ್ಣ, ಶಿಶುನಾಳ ಷರೀಫ, ಸಿದ್ಧೇಶ್ವರ ಸ್ವಾಮಿಗಳು, ಬೇಂದ್ರೆ, ಕಲಬುರ್ಗಿ, ಪುರಂದರದಾಸರು ಮತ್ತು ಕನಕದಾಸರು ಹೀಗೆ ಎಲ್ಲರೂ ಉತ್ತರ ಕರ್ನಾಟಕ ಪ್ರದೇಶದವರೇ ಆಗಿದ್ದಾರೆ’ ಎಂದು ಹೇಳಿದರು.
ಕಾಗಿನೆಲೆ ಪೀಠದ ನಿರಂಜನಾಪುರಿ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ, ಸಾಹಿತಿ ಚಂದ್ರಶೇಖರ ಕಂಬಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.