ADVERTISEMENT

ನವರಾತ್ರಿ: ಕುಸಿದ ಗೊಂಬೆ ಖರೀದಿ ಮೆರುಗು

ಮನೋಹರ್ ಎಂ.
Published 17 ಅಕ್ಟೋಬರ್ 2020, 20:38 IST
Last Updated 17 ಅಕ್ಟೋಬರ್ 2020, 20:38 IST
ಬಸವನಗುಡಿಯ ಮಳಿಗೆಯೊಂದರಲ್ಲಿ ಗೊಂಬೆ ಖರೀದಿಯಲ್ಲಿ ತೊಡಗಿದ್ದ ಯುವತಿ
ಬಸವನಗುಡಿಯ ಮಳಿಗೆಯೊಂದರಲ್ಲಿ ಗೊಂಬೆ ಖರೀದಿಯಲ್ಲಿ ತೊಡಗಿದ್ದ ಯುವತಿ   

ಬೆಂಗಳೂರು: ನವರಾತ್ರಿ ಹಾಗೂ ನಾಡಹಬ್ಬ ದಸರಾಗೆ ನಿಜವಾದ ಮೆರುಗು ತರುವುದು ಗೊಂಬೆ ಕೂರಿಸುವ ಪದ್ಧತಿ. ಆದರೆ, ಈ ಬಾರಿ ಕೊರೊನಾ ಸೋಂಕಿನಿಂದಾಗಿ ಗೊಂಬೆಗಳ ಖರೀದಿಗೆ ಜನರ ಆಸಕ್ತಿ ಕಡಿಮೆಯಾಗಿದೆ. ಇದರಿಂದ ಶೇ 50ರಷ್ಟು ವ್ಯಾಪಾರ ಕುಸಿದಿದೆ ಎನ್ನುತ್ತಾರೆ ಗೊಂಬೆ ಮಳಿಗೆಗಳ ವ್ಯಾಪಾರಿಗಳು.

ನವರಾತ್ರಿ ವೇಳೆಯಲ್ಲಿ ಮನೆಗಳಲ್ಲಿ ಪಟ್ಟದ ಗೊಂಬೆಗಳೂ ಸೇರಿದಂತೆ ವೈವಿಧ್ಯಮಯ ಅಲಂಕಾರಿಕ ಗೊಂಬೆಗಳನ್ನು ಕೂರಿಸುವುದು ವಾಡಿಕೆ. ಆದರೆ, ಈ ಬಾರಿ ಜನರು ನವರಾತ್ರಿಯನ್ನು ಸರಳವಾಗಿ ಆಚರಿಸಲು ಒಲವು ತೋರಿರುವುದರಿಂದ ಗೊಂಬೆ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ.

ನಗರದ ಮಲ್ಲೇಶ್ವರ, ರಾಜಾಜಿನಗರ, ಬಸವನಗುಡಿ, ಜಯನಗರ, ವಿಜಯನಗರ, ವಿವಿ ಪುರಗಳಲ್ಲಿಪ್ರತಿ ವರ್ಷದಂತೆ ಈ ಬಾರಿಯೂ ಗೊಂಬೆ ಮಾರಾಟ ಮಾಡುವ ಮಳಿಗೆಗಳನ್ನು ತೆರೆಯಲಾಗಿದೆ. ದಿನವೊಂದಕ್ಕೆ ಮಳಿಗೆಗೆ ಭೇಟಿ ನೀಡುವ ಗ್ರಾಹಕರ ಸಂಖ್ಯೆ ಶೇ 50ರಷ್ಟುಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಬೇಸರ ತೋರುತ್ತಿದ್ದಾರೆ.

ADVERTISEMENT

‘ನವರಾತ್ರಿ ಆಚರಣೆಗೂ 20 ದಿನ ಮೊದಲೇ ಗೊಂಬೆಗಳ ಖರೀದಿ ಆರಂಭವಾಗುತ್ತದೆ. ಹಬ್ಬಕ್ಕೂ ಮುನ್ನ ಗೊಂಬೆಗಳಿಗಾಗಿ ಆರ್ಡರ್ ಸಹ ನೀಡುತ್ತಿದ್ದರು. ದಿನಕ್ಕೆ ಗರಿಷ್ಠ 60 ಗ್ರಾಹಕರು ಗೊಂಬೆ ಖರೀದಿಸುತ್ತಿದ್ದರು. ಈ ಸಲ 25ರಿಂದ 30 ಗ್ರಾಹಕರು ಮಾತ್ರ ಬರುತ್ತಿದ್ದು, ಖರೀದಿಸುವ ಗೊಂಬೆಗಳ ಸಂಖ್ಯೆಯೂ ಕಡಿಮೆ’ ಎಂದು ಜಯನಗರದ ಎನ್.ಎಸ್.ದಸರಾ ಡಾಲ್ಸ್ ಅಂಗಡಿ ಮಾಲೀಕ ಲಕ್ಷ್ಮೀಪತಿ 'ಪ್ರಜಾವಾಣಿ’ಗೆ ತಿಳಿಸಿದರು.

'ಹಬ್ಬ ಆಚರಿಸುವ ಆಸಕ್ತಿ ಎಲ್ಲರಿಗೂ ಇದೆ. ತಲೆಮಾರುಗಳಿಂದ ಆಚರಿಸುತ್ತಾ ಬಂದಿರುವ ಪದ್ಧತಿಗಳನ್ನು ಯಾರೂ ನಿಲ್ಲಿಸುವುದಿಲ್ಲ. ಕೊರೊನಾದಿಂದ ಸರಳವಾಗಿ ಹಬ್ಬ ಆಚರಿಸಬಹುದು. ಮನೆಗಳಲ್ಲಿ ಈ ಬಾರಿ ಕಡಿಮೆ ಗೊಂಬೆಗಳನ್ನು ಕೂರಿಸುವ ನಿರ್ಧರಿಸಿದ್ದಾರೆ. ಕೋಲ್ಕತ್ತ, ಆಂಧ್ರಪ್ರದೇಶ, ತಮಿಳುನಾಡಿನಿಂದ ಗೊಂಬೆಗಳನ್ನು ತರಿಸಿದ್ದೇವೆ. ಆದರೆ, ಈ ಸಲ ಲಾಭ ಗಳಿಸುವುದು ಅನುಮಾನ'ಎಂದು ಮಲ್ಲೇಶ್ವರದ ಗೊಂಬೆ ವ್ಯಾಪಾರಿಯೊಬ್ಬರು ವಿವರಿಸಿದರು.

***

ಗೊಂಬೆ ಕೂರಿಸುವುದನ್ನು ತಪ್ಪಿಸುವುದಿಲ್ಲ. ಸೋಂಕಿನ ಭಯಕ್ಕೆ ಮನೆಗಳಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆ ಆಗಬಹುದು. ಹಾಗಾಗಿ, ಹಬ್ಬದ ಆಚರಣೆ ಸರಳ ಎನಿಸಲಿದೆ

- ಪೂಜಾ, ಕುಮಾರಸ್ವಾಮಿ ಬಡಾವಣೆ

***

ದಸರಾ ಗೊಂಬೆಗಳಿಗೆ ಬೇಡಿಕೆ ಕಡಿಮೆ ಆಗಿದೆ. ಅನೇಕರು ಖರೀದಿಸದೆ, ಹಿಂತಿರುಗುತ್ತಾರೆ. ಗ್ರಾಹಕರ ಸಂಖ್ಯೆ ಶೇ 50ರಷ್ಟು ಕುಸಿದಿದೆ

- ನಾಗಲಕ್ಷ್ಮೀ, ಗೊಂಬೆ ವ್ಯಾಪಾರಿ, ಬಸವನಗುಡಿ

***

ಮನೆಗೆ ತಲುಪಿಸಲು ಬೇಡಿಕೆ

‘ಕೆಲ ಗ್ರಾಹಕರು ಮನೆಗೆ ಗೊಂಬೆಗಳನ್ನು ತಲುಪಿಸುವಂತೆ ಮನವಿ ಮಾಡುತ್ತಿದ್ದಾರೆ. ಹಲವು ವರ್ಷದಿಂದ ನಮ್ಮಲ್ಲೇ ಗೊಂಬೆ ಖರೀದಿಸುವ ಗ್ರಾಹಕರಿಗೆ ಬೇಸರ ಮಾಡುವುದು ಸರಿಯಲ್ಲ ಎಂದು ವಾಟ್ಸ್ ಆಪ್ ಮುಖಾಂತರ ಗೊಂಬೆಗಳ ಚಿತ್ರಗಳನ್ನು ರವಾನಿಸಿ, ಅವರು ಆಯ್ಕೆ ಮಾಡುವ ಗೊಂಬೆಗಳನ್ನು ತಲುಪಿಸುತ್ತಿದ್ದೇವೆ. ಆಸಕ್ತರು ಗೊಂಬೆಗಳಿಗಾಗಿ 9964650149 ಅನ್ನು ಸಂಪರ್ಕಿಸಬಹುದು’ ಎಂದು ಬಸವನಗುಡಿಯ ಎನ್.ಎಚ್.ದಸರಾ ಗೊಂಬೆಗಳು ಮಳಿಗೆಯ ಸಿಬ್ಬಂದಿ ದೀಪಿಕಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.