ನಗರದ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅಕ್ಬರ್ ಅಲಿ ಉಡುಪಿ, ವಿ.ಗೋಪಾಲಗೌಡ, ಮೊಹಮ್ಮದ್ ಸಾದ್ ಬೆಳಗಾಮಿ, ಅರವಿಂದ ಜತ್ತಿ, ಎಲ್.ಎನ್. ಮುಕುಂದರಾಜ್ ಮತ್ತು ಮೂಡ್ನಾಕೂಡು ಚಿನ್ನಸ್ವಾಮಿ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ದೇವಸ್ಥಾನಕ್ಕೆ ಬಿಡುವುದಿಲ್ಲ ಎಂದು ಹೇಳಿರುವುದು ಧಾರ್ಮಿಕ ಅಪಚಾರವಾಗಿದೆ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ನಗರದ ಬಸವ ಸಮಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
‘ರಾಜಕಾರಣಿಗಳಲ್ಲಿ ಅಸಹನೆಯಷ್ಟೇ ಕಾಣುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಕನ್ನಡ ಭಾಷೆಯನ್ನು ಎತ್ತರಕ್ಕೆ ಕೊಂಡೊಯ್ದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದನ್ನು ವಿವಾದವನ್ನಾಗಿಸಲಾಗುತ್ತಿದೆ. ಮುಸ್ಲಿಂ ಎಂಬ ಕಾರಣಕ್ಕೆ ದಸರಾದಲ್ಲಿ ಭಾಗವಹಿಸದಂತೆ ತಡೆಯಲು ಶ್ರಮಿಸುತ್ತಿರುವುದು ದೊಡ್ಡ ಧಾರ್ಮಿಕ ಅಪಚಾರ ಎಂಬುದು ವಿರೋಧಿಸುತ್ತಿರುವವರಿಗೆ ತಿಳಿಯುತ್ತಿಲ್ಲ ಅನ್ನುವುದೇ ವಿಷಾದದ ಸಂಗತಿ. ಎಲ್ಲರನ್ನೂ ಒಳಗೊಂಡರೆ ಮಾತ್ರ ನಮ್ಮ ಸಮಾಜ ಬೆಳೆಯುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕುರ್‌ಆನ್, ಭಗವದ್ಗೀತೆ, ಬೈಬಲ್ ಸೇರಿದಂತೆ ಎಲ್ಲ ಧರ್ಮ ಗ್ರಂಥಗಳಲ್ಲಿನ ಸಂದೇಶಗಳನ್ನು ಮುಸ್ಲಿಮರು, ಹಿಂದೂಗಳು, ಕ್ರೈಸ್ತರು ಪರಸ್ಪರ ಹಂಚಿಕೊಳ್ಳಬೇಕು. ಆ ರೀತಿಯ ಕೊಡುಕೊಳ್ಳುವಿಕೆಯ ಸಂಬಂಧಗಳು ಬೆಳೆದರೆ ಮಾತ್ರ ಮನುಷ್ಯರು ಒಂದಾಗಿ, ಇನ್ನೊಬ್ಬರನ್ನು ಸಹಿಸಿಕೊಂಡು ಇರಲು ಸಾಧ್ಯ ಎಂದರು.
ಪ್ರವಾದಿ ಮುಹಮ್ಮದ್ ಹೆಣ್ಣು ಮಕ್ಕಳು, ದೀನ ದಲಿತರ ಪರವಾಗಿ ಕರುಣೆಯಿಂದ ಕೆಲಸ ಮಾಡಿದ್ದರು. ‘ನೆರೆಮನೆಯವನು ಹಸಿದಿರುವಾಗ, ನೀವು ಹೊಟ್ಟೆ ಪೂರ್ತಿ ತಿನ್ನಬೇಡಿ, ಹಂಚಿಕೊಂಡು ತಿನ್ನಿ’ ಎನ್ನುವ ಮೂಲಕ ಪ್ರವಾದಿ ಅವರು ಬಂಡವಾಳಶಾಹಿಗಳ ವಿರೋಧಿ ಎಂಬುದನ್ನು ತೋರಿಸಿಕೊಟ್ಟಿದ್ದರು ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ‘ದ್ವೇಷ, ಕೊಲೆ, ಹಿಂಸೆ ಮಾಡುವುದು ಏಕೆ? ಮನುಷ್ಯ ಅತ್ಯಂತ ಕ್ರೂರ ಪ್ರಾಣಿ. ಈ ಪ್ರಾಣಿಯನ್ನು ಮನುಷ್ಯನನ್ನಾಗಿ ಮಾಡಲು ಪ್ರವಾದಿ ಹುಟ್ಟು ಬರಬೇಕಾಯಿತು. 12ನೇ ಶತಮಾನದಲ್ಲೂ ಅಸಹನೀಯ ವಾತಾವರಣ ಇತ್ತು. ದುಡಿಯುವ ವರ್ಗದರ ಮೇಲೆ ತೆರಿಗೆ ಹಾಕಿ, ಶೋಷಣೆ ಮಾಡಲಾಗುತ್ತಿತ್ತು. ಧರ್ಮ ನಡವಳಿಕೆಯಲ್ಲಿ ಇರಬೇಕೆ ಹೊರತು ನಾಲಿಗೆಯಲ್ಲಿ ಅಲ್ಲ’ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್ ಸಾದ್ ಬೆಳಗಾಮಿ, ಶಾಸಕ ರಿಜ್ವಾನ್ ಅರ್ಷದ್, ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಬಸವಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಗುರು ಸಿಂಗ್ ಸಭಾದ ಪ್ರೊ. ಹರ್ಜಿಂದರ್ ಸಿಂಗ್ ಭಾಟಿಯಾ, ಜಮಾಅತೆ ಇಸ್ಲಾಮಿ ಹಿಂದ್‌ನ ಅಕ್ಬರ್ ಅಲಿ ಉಡುಪಿ ಮಾತನಾಡಿದರು.
ಇದೇ ವೇಳೆ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿ ಮುಹಮ್ಮದರನ್ನು ಅರಿಯಿರಿ ಹಾಗೂ ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ ಆದರ್ಶದ ಔಚಿತ್ಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
‘ನ್ಯಾಯಾಂಗ ಮಧ್ಯೆ ಪ್ರವೇಶಿಸಲಿ’: ವಿ.ಗೋಪಾಲಗೌಡ
ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ ‘ಸಂವಿಧಾನದಲ್ಲಿ ಎಲ್ಲರೂ ಸಮಾನ ಎಂದು ಹೇಳುವಾಗ ಧರ್ಮಗಳ ನಡುವೆ ಕಲಹ ಉಂಟು ಮಾಡುವ ಪಟ್ಟಭದ್ರ ಹಿತಾಸಕ್ತಿಗಳು ಇವೆ. ವಕ್ಫ್ ಕಾಯ್ದೆಯನ್ನು ಸಂಸತ್‌ನಲ್ಲಿ ಚರ್ಚೆಯಿಲ್ಲದೇ ತಿದ್ದುಪಡಿ ಮಾಡಿ ಅದರ ಮೂಲಭೂತ ಹಕ್ಕುಗಳಿಗ ಚ್ಯುತಿ ಉಂಟು ಮಾಡಲಾಗಿದೆ. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಶೋಷಿತ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವುದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿವೆ. ಅನ್ಯಾಯ ನಡೆದಾಗ ಮಧ್ಯೆ ಪ್ರವೇಶಿಸುವ ಜವಾಬ್ದಾರಿ ನ್ಯಾಯಾಂಗಕ್ಕೂ ಇದೆ. ಸರ್ಕಾರಗಳು ಸಂವಿಧಾನಬದ್ಧ ಕರ್ತವ್ಯ ನಿರ್ವಹಿಸದೇ ಇದ್ದಾಗ ಅನ್ಯಾಯಕ್ಕೆ ಒಳಗಾದವರ ಬಗ್ಗೆ ಯೋಚನೆ ಮಾಡಿ ನ್ಯಾಯಾಂಗ ತೀರ್ಪು ನೀಡಬೇಕಿದೆ’ ಎಂದು ಹೇಳಿದರು. ‘ನಗರದಲ್ಲಿ ರಸ್ತೆಗಳು ಹದಗೆಟ್ಟಿವೆ. ಜನರು ಸಾಯುತ್ತಿದ್ದಾರೆ. ವರ್ಷಗಟ್ಟಲೇ ಸಿಮೆಂಟ್ ರಸ್ತೆ ಹಾಕುತ್ತೀರಾ? ನಿಮ್ಮನ್ನು ಯಾರು ಕೇಳುವವರು ಇಲ್ಲವಾ? ಇದನ್ನು ನಿಮ್ಮ ನಗರಾಭಿವೃದ್ಧಿ ಸಚಿವರಿಗೆ ಹೇಳ್ರಿ’ ಎಂದು ವೇದಿಕೆಯಲ್ಲಿದ್ದ ಶಾಸಕ ರಿಜ್ವಾನ್ ಅರ್ಷದ್‌ಗೆ ಗೋಪಾಲಗೌಡರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.