ADVERTISEMENT

ದಸರಾ: ಮಾರುಕಟ್ಟೆಗಳಲ್ಲಿ ಹೂ ವ್ಯಾಪಾರ ನೀರಸ

ಮಳೆಯಿಂದ ಬೇಡಿಕೆ ಕಳೆದುಕೊಂಡ ಕೆಲ ಹೂಗಳು * ಬೆಲೆ ಕಡಿಮೆ ಇದ್ದರೂ ಖರೀದಿಗೆ ಗ್ರಾಹಕರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 21:16 IST
Last Updated 12 ಅಕ್ಟೋಬರ್ 2021, 21:16 IST
ದಸರಾ ಅಂಗವಾಗಿ ಕೆ.ಆರ್‌.ಮಾರುಕಟ್ಟೆ ಆವರಣದಲ್ಲಿ ವ್ಯಾಪಾರಕ್ಕೆ ರಾಶಿ ಹಾಕಲಾಗಿರುವ ಬೂದುಗುಂಬಳ–ಪ್ರಜಾವಾಣಿ ಚಿತ್ರ
ದಸರಾ ಅಂಗವಾಗಿ ಕೆ.ಆರ್‌.ಮಾರುಕಟ್ಟೆ ಆವರಣದಲ್ಲಿ ವ್ಯಾಪಾರಕ್ಕೆ ರಾಶಿ ಹಾಕಲಾಗಿರುವ ಬೂದುಗುಂಬಳ–ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಪ್ರಯುಕ್ತ ತರಕಾರಿ, ಸೊಪ್ಪು ಹಾಗೂ ಸಾಮಗ್ರಿಗಳ ದರ ಗಗನಕ್ಕೇರಿವೆ. ಈ ಬಾರಿ ಮಳೆಯಿಂದಾಗಿ ಹೂಗಳೆಲ್ಲ ಹೆಚ್ಚು ಹಾನಿಗೆ ತುತ್ತಾಗಿದ್ದು, ಮಾರುಕಟ್ಟೆಗಳಲ್ಲಿ ಹೂವಿನ ವ್ಯಾಪಾರಕ್ಕೆ ಸ್ವಲ್ಪ ಪೆಟ್ಟು ಬಿದ್ದಿದೆ.

ನವರಾತ್ರಿ ಆಚರಣೆಯ ವೇಳೆ ಪ್ರತಿ ವರ್ಷ ಹೂಗಳ ದರ ಏರಿಕೆಯಾಗುತ್ತಿತ್ತು. ಎರಡು ವಾರಗಳವರೆಗೆ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ಈ ಸಮಯದಲ್ಲಿ ಹೂವಿನ ಬೆಳೆಗಾರರು ಹಾಗೂ ವರ್ತಕರು ಲಾಭ ನೋಡುತ್ತಿದ್ದರು.

ಆಯುಧ ಪೂಜೆಯಂದು ವಾಹನಗಳು, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡುತ್ತಿದ್ದರು. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟ ಆಗುತ್ತಿತ್ತು.

ADVERTISEMENT

‘ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸೇವಂತಿಗೆ, ಕನಕಾಂಬರ, ಚೆಂಡು ಹೂವು ಹಾಗೂ ಗುಲಾಬಿ ಹೂಗಳು ಹಾಳಾಗಿವೆ. ಇದರಿಂದ ಮಾರುಕಟ್ಟೆಗೆ ಬರುತ್ತಿರುವ ಹೂಗಳು ನೀರು ತುಂಬಿಕೊಂಡಿದ್ದು, ಅವುಗಳ ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೂವಿನ ವ್ಯಾಪಾರಿಗಳು ಅಳಲು ತೋಡಿಕೊಂಡರು.

‘ಸೇವಂತಿಗೆ, ಕನಕಾಂಬರ, ಗುಲಾಬಿ ದಸರಾ ವೇಳೆ ಹೆಚ್ಚು ಬೇಡಿಕೆಯಾಗುವ ಹೂಗಳು. ಗುಲಾಬಿಗೆ ಹೋಲಿಸಿದರೆ, ಈ ಬಾರಿ ಸೇವಂತಿ, ಕನಕಾಂಬರ ಮತ್ತು ಚೆಂಡು ಹೂ ಮಳೆಗೆ ಹಾಳಾಗಿವೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕ ದಿವಾಕರ್‌ ಬೇಸರ ವ್ಯಕ್ತಪಡಿಸಿದರು.

‘ಗುಣಮಟ್ಟದ ಹೂವಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚು. ಆಗ ಬೆಲೆಯೂ ಸಾಮಾನ್ಯವಾಗಿ ಏರುತ್ತದೆ. ಆದರೆ, ಈಗ ಸೇವಂತಿಯಂತಹ ಹೂಗಳು ಮಳೆಗೆ ಬಲುಬೇಗನೆ ಹಾಳಾಗುತ್ತವೆ. ಮಾರುಕಟ್ಟೆಗೆ ಬರುವಷ್ಟರಲ್ಲಿ ಉದುರುವ ಸ್ಥಿತಿಯಲ್ಲಿರುವ ಹೂವನ್ನು ಗ್ರಾಹಕರು ಹೇಗೆ ಖರೀದಿಸುತ್ತಾರೆ?’ ಎಂದೂ ಪ್ರಶ್ನಿಸಿದರು.

‘ಕಳೆದ ವರ್ಷ ಕೋವಿಡ್‌, ಈ ಬಾರಿ ಮಳೆ ನಮ್ಮ ವ್ಯಾಪಾರವನ್ನು ಕಸಿದಿದೆ. ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದ ಗ್ರಾಹಕರೂ ಬರುತ್ತಿಲ್ಲ. ಹೂವಿನ ದರಗಳೆಲ್ಲ ಅಷ್ಟೇನೂ ಏರಿಕೆಯಾಗಿಲ್ಲ. ಬುಧವಾರ ಸಂಜೆ ವೇಳೆಗೆ ಗ್ರಾಹಕರ ಸಂಖ್ಯೆ‌ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದೂ ಹೇಳಿದರು.

ನಗರದ ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಬಸವನಗುಡಿ ಸೇರಿದಂತೆ ಜನಜಂಗುಳಿಯಾಗುತ್ತಿದ್ದ ಮಾರುಕಟ್ಟೆ ಪ್ರದೇಶಗಳಲ್ಲಿ ಮಂಗಳವಾರ ಹೆಚ್ಚು ಗ್ರಾಹಕರು ಕಂಡುಬರಲಿಲ್ಲ. ಆದರೆ, ತರಕಾರಿ, ಅಲಂಕಾರಿ ವಸ್ತುಗಳು, ದಿನಸಿ, ಬೂದುಗುಂಬಳ, ಬಾಳೆಕಂದು ಖರೀದಿ ಜೋರಾಗಿತ್ತು.ಹಣ್ಣಿನ ದರಗಳು ಸ್ಥಿರವಾಗಿದ್ದು, ಸೊಪ್ಪಿನ ದರಗಳೆಲ್ಲ ದುಬಾರಿಯಾಗಿವೆ.

ತರಕಾರಿಗಳ ದರ ಕೆ.ಜಿಗೆ ₹10ರಷ್ಟು ಏರಿಕೆ: ‘ಟೊಮೆಟೊ, ಈರುಳ್ಳಿ, ಬದನೆ, ಬೀನ್ಸ್‌, ಕ್ಯಾರೆಟ್‌ ಸೇರಿದಂತೆ ಪ್ರತಿ ತರಕಾರಿ ದರಗಳು ಕೆ.ಜಿಗೆ ₹10ರಿಂದ ₹20ರವರೆಗೆ ದಿಢೀರ್ ಏರಿಕೆಯಾಗಿವೆ. ಸಗಟು ದರದಲ್ಲೇ ಟೊಮೆಟೊ ₹60ರಂತೆ ಮಾರಾಟವಾಗುತ್ತಿದ್ದು, ಚಿಲ್ಲರೆ ದರ ₹80 ದಾಟಿದೆ’ ಎಂದು ತರಕಾರಿ ವ್ಯಾಪಾರಿ ಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.