ADVERTISEMENT

ದಾಸರಹಳ್ಳಿ ವಿಧಾನಸಭೆ ಕ್ಷೇತ್ರ | ಮೂಲ, ವಲಸಿಗರ ಸಮರ ಜೋರು; ‘ಕೈ’ಗೆ ಬಿಸಿತುಪ್ಪ

ಟಿಕೆಟ್‌ ಘೋಷಣೆಗೂ ಮುನ್ನವೇ ಕೈ ಆಕಾಂಕ್ಷಿಗಳ ನಡುವೆಯೇ ಆರೋಪ, ಪ್ರತ್ಯಾರೋಪ

ಆದಿತ್ಯ ಕೆ.ಎ
Published 9 ಏಪ್ರಿಲ್ 2023, 2:12 IST
Last Updated 9 ಏಪ್ರಿಲ್ 2023, 2:12 IST
   

ಬೆಂಗಳೂರು: ಟಿ.ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಮೂಲ ಹಾಗೂ ವಲಸಿಗರು ಎಂಬ ವಿಚಾರವು ಸಮರಕ್ಕೆ ಕಾರಣವಾಗಿದ್ದು ಅಭ್ಯರ್ಥಿಯ ಹೆಸರು ಘೋಷಣೆಯು ‘ಕೈ’ ಪಡೆಯ ವರಿಷ್ಠರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಧನಂಜಯ್‌ ಅವರು ಟಿಕೆಟ್‌ ಆಕಾಂಕ್ಷಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು ಉಳಿದ ಆಕಾಂಕ್ಷಿಗಳಾದ ಜಿ. ಧನಂಜಯ್‌ ಸೇರಿದಂತೆ ಹಲವರು ಹೆಸರು ಘೋಷಣೆಗೂ ಮುನ್ನವೇ ತಿರುಗಿ ಬಿದ್ದಿದ್ದಾರೆ.

‘ಕೆಲವು ತಿಂಗಳ ಹಿಂದಷ್ಟೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವ ಧನಂಜಯ್‌ಗೆ ಟಿಕೆಟ್‌ ನೀಡಿದರೆ ಮೂಲ ಕಾಂಗ್ರೆಸ್ ನಾಯಕರಿಗೆ ದ್ರೋಹ ಎಸಗಿದಂತೆ ಆಗಲಿದೆ’ ಎಂದು ಕೃಷ್ಣಮೂರ್ತಿ ಸೇರಿದಂತೆ ಟಿಕೆಟ್‌ ಆಕಾಂಕ್ಷಿಗಳು ಎಚ್ಚರಿಕೆ ರವಾನಿಸಿದ್ದಾರೆ. ಕೃಷ್ಣಮೂರ್ತಿ ಬಹಿರಂಗವಾಗಿಯೇ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ADVERTISEMENT

ಗೀತಾ ಶಿವರಾಮ್‌, ದಂತ ವೈದ್ಯೆ ನಾಗಲಕ್ಷ್ಮಿ ಚೌಧರಿ, ರಮೇಶ್‌ಗೌಡ, ಕೆ.ಸಿ.ಅಶೋಕ್‌, ನಾಗಭೂಷಣ್‌ ಅವರೂ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಆಕಾಂಕ್ಷಿಗಳ ದೊಡ್ಡಪಟ್ಟಿಯಿರುವ ಕಾರಣಕ್ಕೆ ವರಿಷ್ಠರಿಗೆ ದಾಸರಹಳ್ಳಿ ಕ್ಷೇತ್ರದಲ್ಲಿ ಅಭ್ಯರ್ಥಿ ಹೆಸರನ್ನು ಘೋಷಿಸಲು ಇನ್ನೂ ಸಾಧ್ಯವಾಗಿಲ್ಲ.

ಶಾಂತಿಧಾಮ ಶಿಕ್ಷಣ ಸಂಸ್ಥೆಯ ಮಾಲೀಕ ಧನಂಜಯ್‌ ಕ್ಷೇತ್ರದಾದ್ಯಂತ ಸಂಚಾರ ನಡೆಸುತ್ತಿದ್ದು ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ನಾಗಲಕ್ಷ್ಮಿ ಅವರು ಕ್ಷೇತ್ರದಲ್ಲಿ ಆರೋಗ್ಯ ಶಿಬಿರ ಸೇರಿ ಸಾಕಷ್ಟು ಕಾರ್ಯಕ್ರಮ ನಡೆಸಿದ್ದರು. ಗೀತಾ ಸಹ ಕೋವಿಡ್ ಲಾಕ್‌ಡೌನ್‌ ವೇಳೆ ಜನರಿಗೆ ನೆರವಾಗಿದ್ದರು. ಇದನ್ನೇ ಆಧರಿಸಿ ಇವರೂ ಟಿಕೆಟ್‌ಗೆ ಪಟ್ಟು ಹಿಡಿದಿದ್ದು ಹಗ್ಗಜಗ್ಗಾಟ ಮುಂದುವರಿದಿದೆ.

ಹಾಲಿ ಶಾಸಕ ಮಂಜುನಾಥ್‌ ಅವರ ಹೆಸರನ್ನೇ ಒಂದು ತಿಂಗಳ ಹಿಂದೆ ಜೆಡಿಎಸ್‌ ಪ್ರಕಟಿಸಿತ್ತು. ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆದಿದ್ದು ಪ್ರಚಾರದಲ್ಲಿ ಜೆಡಿಎಸ್‌ ಒಂದು ಹೆಜ್ಜೆ ಮುಂದಿದೆ. ಬಿಜೆಪಿಯಿಂದ ಮಾಜಿ ಶಾಸಕ ಎಸ್‌.ಮುನಿರಾಜ್‌, ಎನ್‌.ಲೋಕೇಶ್‌ಗೌಡ ನಡುವೆ ಟಿಕೆಟ್‌ಗೆ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿಯಲ್ಲಿ ಅಭ್ಯರ್ಥಿಗಳ ಅಧಿಕೃತ ಘೋಷಣೆಯಾಗಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಇನ್ನೂ ಆರಂಭಗೊಂಡಿಲ್ಲ.

‘2018ರಲ್ಲಿ ಇದೇ ಕ್ಷೇತ್ರದ ಅಭ್ಯರ್ಥಿಯಾಗಿದ್ದೆ. ಐದು ವರ್ಷದಿಂದ ಪಕ್ಷದ ಪರ ಕೆಲಸ ಮಾಡುತ್ತಿರುವೆ. ಬಿಜೆಪಿಯಲ್ಲಿದ್ದ ಧನಂಜಯ್‌ ಅವರನ್ನು ಕರೆ ತರಲಾಗಿದೆ. 30 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಈ ಬಾರಿ ಉತ್ತಮ ವಾತಾವರಣವಿತ್ತು. ಅವರಿಗೆ ಟಿಕೆಟ್‌ ನೀಡಿದರೆ ಮೂಲ ಕಾಂಗ್ರೆಸ್‌ ನಾಯಕರು ಹಾಗೂ ಕ್ಷೇತ್ರದ ಜನರಿಗೆ ನ್ಯಾಯ ಕಲ್ಪಿಸಲು ಸಾಧ್ಯವಿಲ್ಲ’ ಎಂದು ಕೃಷ್ಣಮೂರ್ತಿ ಆಕ್ರೋಶ ಹೊರಹಾಕಿದ್ದಾರೆ.

‘ಧನಂಜಯ್‌ ಬಿಜೆಪಿಯಿಂದ ನಮ್ಮ ಪಕ್ಷಕ್ಕೆ ಬಂದು 4 ತಿಂಗಳಾಗಿದೆ. ನಾವು ಕ್ಷೇತ್ರದಲ್ಲಿ ಪಕ್ಷ ಕಟ್ಟಿದ್ದೇವೆ. ಭಾರತ್ ಜೋಡೊ ಯಾತ್ರೆ, ರ್‍ಯಾಲಿ, ಪ್ರತಿಭಟನೆ, ಡಿಜಿಟಲ್‌ ಸದಸ್ಯತ್ವ... ಹೀಗೆ ನಾನಾ ಕೆಲಸ ಮಾಡಿದ್ದೇವೆ. ಮೂಲ ಕಾಂಗ್ರೆಸ್‌ನವರು ಒಂದಾಗಿದ್ದು ನಮ್ಮಲ್ಲಿಯೇ ಯಾರಿಗಾದರೂ ಟಿಕೆಟ್‌ ಕೊಡಲಿ’ ಎಂದು ಡಾ.ನಾಗಲಕ್ಷ್ಮಿ ಚೌಧರಿ ಹೇಳುತ್ತಾರೆ.

‘2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಸೋಲಿನ ಅಂತರ ಕೇವಲ 10 ಸಾವಿರವಿತ್ತು. ಅದನ್ನು 2018ರಲ್ಲಿ 63 ಸಾವಿರಕ್ಕೆ ಏರಿಸಿದವರು ಯಾರು? ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಸಿದ್ಧತೆ ಮಾಡಿಕೊಂಡಿದ್ದೇನೆ. ನಗರದ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಅವರು ನನ್ನ ತಮ್ಮನಿಗೆ ಮಾವ ಆಗಬೇಕು. ಅದೇ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ. ನನ್ನ ರಾಜಕೀಯವೇ ಬೇರೆ. ನಾನು ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ, ಯುವ ಕಾಂಗ್ರೆಸ್‌ ಉಪಾಧ್ಯಕ್ಷನಾಗಿಯೂ ಕೆಲಸ ಮಾಡಿರುವೆ. ದಿಢೀರ್ ಪ್ರತ್ಯಕ್ಷವಾಗಿಲ್ಲ’ ಎಂದು ಧನಂಜಯ್‌ ಪ್ರತ್ಯುತ್ತರ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.