ಬೆಂಗಳೂರು: ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳಿಲ್ಲದೇ, ಸಕಾಲದಲ್ಲಿ ಅವರನ್ನು ಆರೈಕೆ ಮಾಡದೇ, ಅನೇಕ ಬಾಣಂತಿಯರ ಸಾಲು ಸಾಲು ಸಾವುಗಳು ಸಂಭವಿಸುತ್ತಿವೆ. ಇದು ಸರ್ಕಾರಿ ಆಸ್ಪತ್ರೆಗಳು ಎಂತಹ ದುಃಸ್ಥಿತಿಯಲ್ಲಿವೆ ಎಂಬುದಕ್ಕೆ ಉದಾಹರಣೆಯಾಗಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಅಖಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಸೋಮವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ಮಹಿಳೆಯರ ಆಗ್ರಹ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ವರ್ಗದ ಜನರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಆದರೆ, ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲ. ಸರ್ಕಾರಿ ಆಸ್ಪತ್ರೆಯ ವೈದ್ಯರು ಪರಿಣತರಿದ್ದಾರೆ. ಆದರೆ, ಅಲ್ಲಿ ಅಗತ್ಯ ಉಪಕರಣಗಳಿವೆಯಾ, ಆಸ್ಪತ್ರೆಗೆ ಬೇಕಾದ ಮೂಲಸೌಲಭ್ಯ ಹಾಗೂ ಅಗತ್ಯ ಸಿಬ್ಬಂದಿ ಇದ್ದಾರೆಯೇ’ ಎಂದು ಪ್ರಶ್ನಿಸಿದರು.
‘ಸಮಾಜದಲ್ಲಿ ಎಲ್ಲಿಯವರೆಗೆ ತಾಯ್ತನ ನೆಲಸುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಲ್ಲುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಉನ್ನತೀಕರಿಸಬೇಕು. ಬಾಣಂತಿಯರ ಹಾಗೂ ಮಕ್ಕಳ ಸಾವುಗಳನ್ನು ತಪ್ಪಿಸಬೇಕು. ಪ್ರಜಾಸತ್ತಾತ್ಮಕ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜನಸ್ನೇಹಿ ಆಸ್ಪತ್ರೆಗಳನ್ನು ನಿರ್ಮಿಸಬೇಕು’ ಎಂದು ಹೇಳಿದರು.
‘ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರ್ಕಾರ ಗ್ಯಾರಂಟಿ ನೀಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಉನ್ನತೀಕರಿಸಲು ಕ್ರೀಯಾಯೋಜನೆ ಸಿದ್ಧಪಡಿಸಬೇಕು. ಹೆಣ್ಣುಮಕ್ಕಳಿಗೆ ಆರೋಗ್ಯವನ್ನು ಖಾತ್ರಿಪಡಿಸಿದರೆ, ಅದು ಮಾನವೀಯ ನಡೆ ಆಗಲಿದೆ’ ಎಂದರು.
ಮಹಿಳಾ ಘನತೆ–ಮುಂದಿರುವ ಸವಾಲುಗಳು ಹಾಗೂ ಮಹಿಳಾ ಸ್ವಾಸ್ಥ್ಯ–ವ್ಯವಸ್ಥೆಯ ಕರಾಳತೆ ಕುರಿತು ಗೋಷ್ಠಿಗಳು ನಡೆದವು.
ಮನೋಚಿಕಿತ್ಸಕ ನಡಹಳ್ಳಿ ವಸಂತ್, ಎಐಎಂಎಸ್‌ಎಸ್‌ನ ರಾಜ್ಯ ಘಟಕದ ಅಧ್ಯಕ್ಷೆ ಎಂ.ಎನ್. ಮಂಜುಳಾ, ಕಾರ್ಯದರ್ಶಿ ಶೋಭಾ ಎಸ್., ರಾಷ್ಟ್ರೀಯ ಉಪಾಧ್ಯಕ್ಷೆ ಡಾ. ಸುಧಾ ಕಾಮತ್, ಗುಂಡಮ್ಮ ಉಪಸ್ಥಿತರಿದ್ದರು.
ನಮ್ಮೂರಿನಲ್ಲಿರುವ ಆಸ್ಪತ್ರೆಗೆ ಮಹಿಳಾ ವೈದ್ಯರೊಬ್ಬರನ್ನು ನಿಯೋಜಿಸುವಂತೆ ಎಂಟು ತಿಂಗಳ ಹಿಂದೆಯೇ ಕೇಳಿಕೊಂಡಿದ್ದೇನೆ. ಆದರೆ ಇದುವರೆಗೂ ನಿಯೋಜಿಸಿಲ್ಲ. ರಾಜ್ಯದಲ್ಲಿ ಮಹಿಳಾ ವೈದ್ಯರಿಲ್ಲದ ಅನೇಕ ಆಸ್ಪತ್ರೆಗಳಿವೆಬರಗೂರು ರಾಮಚಂದ್ರಪ್ಪ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.