
ಬೆಂಗಳೂರು: ‘ಡಿಎಚ್ ಚೇಂಜ್‌ಮೇಕರ್‌ನ ಸಾಧಕರನ್ನು ನೋಡಿ, ಅವರ ಜೀವನವನ್ನು ಅರಿತುಕೊಂಡ ಮೇಲೆ ಬದಲಾವಣೆ ತರುವುದು ಹೇಗೆ ಎಂಬುದರ ಅರ್ಥ ನನಗೆ ತಿಳಿಯಿತು’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದರು.
‘ಡೆಕ್ಕನ್ ಹೆರಾಲ್ಡ್ ಚೇಂಜ್‌ಮೇಕರ್ಸ್ 2024’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ಮ ಸಂವಿಧಾನದ ತತ್ವಗಳಾದ ಸಮಾನತೆ, ಸಬಲೀಕರಣ, ಸಾಮಾಜಿಕ ಪರಿವರ್ತನೆ, ಮಕ್ಕಳ ಆರೈಕೆ, ಅಸಮಾನತೆ ನಿವಾರಣೆ, ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿತಗೊಳಿಸುವ ಕ್ರಿಯಾಶೀಲನೆ ಈ 15 ಚೇಂಜ್‌ಮೇಕರ್ಸ್ ಅವರ ಸಾಧನೆಯಲ್ಲಿದೆ’ ಎಂದು ಶ್ಲಾಘಿಸಿದರು.
ಕಾನೂನು ವಿದ್ಯಾರ್ಥಿಯಾಗಿದ್ದಾಗಿನ ತಮ್ಮ ಅನುಭವವನ್ನು ಸ್ಮರಿಸಿಕೊಂಡ ಬಿ.ಎಸ್. ಪಾಟೀಲ್, ‘ಪ್ರತಿಯೊಬ್ಬ ಪ್ರಜೆಯೂ ಉತ್ಕೃಷ್ಟತೆಯನ್ನು ಸಾಧಿಸಲು ನಿರಂತರವಾಗಿ ಶ್ರಮಿಸಬೇಕು ಎಂದು ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ವೈಯಕ್ತಿಕ ಸಾಧನೆಯ ಶ್ರೇಷ್ಠತೆಯು ಸಾಮೂಹಿಕ ಶ್ರೇಷ್ಠತೆಯತ್ತ ಸಾಗಿ ದೇಶವನ್ನು ಪ್ರಗತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ’ ಎಂದು ಹೇಳಿದರು.
‘40ಕ್ಕಿಂತ ಕಡಿಮೆ ವಯಸ್ಸಿನವರು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿರುವುದು ಮತ್ತು ಅವರನ್ನು ಗುರುತಿಸಿರುವುದು ಹೆಮ್ಮೆಯ ಸಂಗತಿ’ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ಅವರು ಹರ್ಷ ವ್ಯಕ್ತಪಡಿಸಿದರು.
‘ಸಮಾಜದ ಕಟ್ಟುಪಾಡುಗಳನ್ನು ಮೀರಿ ಸಾಧನೆ ಮಾಡಿದ ಜನರನ್ನು ಗುರುತಿಸಿ, ಸನ್ಮಾನಿಸಿರುವುದು ಉತ್ತಮವಾದ ಕಾರ್ಯ’ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ ಹೇಳಿದರು.
‘ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದ ಜನರನ್ನು ಗುರುತಿಸಿ ಪ್ರಶಂಸಿಸುವುದು ಅತ್ಯಂತ ದೊಡ್ಡ ಕಾರ್ಯವಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.