ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನಗರದ ಮಾರುಕಟ್ಟೆಗಳಲ್ಲಿ ಭಾನುವಾರ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬೆಳಕಿನ ಹಬ್ಬದ ಮೆರುಗು ಹೆಚ್ಚಿಸುವ ಹೂವು, ಹಣ್ಣು, ಹಣತೆ, ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಮಳಿಗೆಗಳಲ್ಲಿ ಮುಗಿಬಿದ್ದಿದ್ದರು.
ಮಾರುಕಟ್ಟೆಗಳಲ್ಲಿ ಮಣ್ಣಿನ ಹಣತೆಗಳನ್ನು ರಸ್ತೆ ಬದಿಗಳಲ್ಲೇ ರಾಶಿ ಹಾಕಲಾಗಿದೆ. ತರಹೇವಾರಿ ವಿನ್ಯಾಸದ ಹಣತೆಗಳು ಜನರನ್ನು ಆಕರ್ಷಿಸುತ್ತಿದ್ದವು. ದೀಪವೊಂದರ ಬೆಲೆ ₹5ರಿಂದ ₹300ವರೆಗೂ ಇದೆ.
ಕೆ.ಆರ್. ಮಾರುಕಟ್ಟೆ, ಯಶವಂತಪುರ, ಬಸವನಗುಡಿ, ಮಲ್ಲೇಶ್ವರ ಮಾರುಕಟ್ಟೆ ಪ್ರದೇಶಗಳು ಜನಜಂಗುಳಿಯಿಂದ ಕೂಡಿದ್ದವು. ತರಕಾರಿ, ದಿನಸಿ ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ವೀಳ್ಯದೆಲೆ, ತೆಂಗಿನಕಾಯಿ ಖರೀದಿ ಜೋರಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಹೂವು ಹಾಗೂ ಆಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಕಿರು ಮಾರುಕಟ್ಟೆಗಳು ತಲೆಎತ್ತಿವೆ.
ಹಬ್ಬದ ಕಾರಣ ಹೂವಿನ ದರ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ. ಕನಕಾಂಬರ ದರ ₹1,600, ಮಲ್ಲಿಗೆ ₹1,500, ಚೆಂಡು, ಸೇವಂತಿಗೆ ₹200, ಗುಲಾಬಿ ₹240 ಮತ್ತು ಸುಗಂಧರಾಜ ₹120 ಇತ್ತು.
‘ದೀಪಾವಳಿಗೆ ಹೆಚ್ಚು ಖರೀದಿಯಾಗುವುದು ಸೇವಂತಿಗೆ ಹಾಗೂ ಚೆಂಡು ಹೂ. ಈ ಹೂಗಳ ಬೆಲೆ ಅಷ್ಟೇನೂ ಏರಿಕೆಯಾಗಿಲ್ಲ. ಉಳಿದ ಹೂಗಳ ದರ ಎಂದಿನಂತೆ ಸ್ವಲ್ಪ ಹೆಚ್ಚಾಗಿದೆ. ಆದರೆ, ವರಮಹಾಲಕ್ಷ್ಮಿ ಮತ್ತು ದಸರಾ ಹಬ್ಬಗಳಲ್ಲಿ ಇದ್ದ ಹೂವಿನ ಬೇಡಿಕೆ ಈಗಿಲ್ಲ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕರಾದ ಮಂಜುನಾಥ್ ಮತ್ತು ರಮೇಶ್ ತಿಳಿಸಿದರು.
ಪೂಜಾ ಸಾಮಗ್ರಿಗಳ ಖರೀದಿ ಭರಾಟೆ: ದೀಪಾವಳಿಯನ್ನು ವಿವಿಧ ಸಮುದಾಯದವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಆಚರಿಸುತ್ತಾರೆ. ಬಹುತೇಕರು ಹಿಂದಿನಿಂದಲೂ ಈ ಹಬ್ಬಕ್ಕೆ ನೋಮುವ ಸಂಪ್ರದಾಯ ಉಳಿಸಿಕೊಂಡಿದ್ದಾರೆ. ಇದಕ್ಕೆಂದೇ ಕೈಗೆ ನೋಮುದಾರ ಕಟ್ಟಿಕೊಂಡು ಆಚರಣೆಯಲ್ಲಿ ತೊಡಗುತ್ತಾರೆ.
ಪೂಜೆಯ ವೇಳೆ ನೋಮುದಾರ, ಅರಿಶಿನ–ಕುಂಕುಮ, ಅಡಿಕೆ, ವೀಳ್ಯದ ಎಲೆಗಳನ್ನು ಬಾಗಿನ ರೂಪದಲ್ಲಿ ಪ್ರಧಾನವಾಗಿ ಇಡುತ್ತಾರೆ. ಹಾಗಾಗಿ, ಪೂಜಾ ಸಾಮಗ್ರಿಗಳ ಮಳಿಗೆಗಳ ಬಳಿಯೂ ಜನರ ದಂಡು ಬೀಡುಬಿಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.