ADVERTISEMENT

ಡೀಪ್‌ಫೇಕ್‌ ವಿಡಿಯೊ: ₹3.75 ಕೋಟಿ ಕಳೆದುಕೊಂಡ ಮಹಿಳೆ

ಜಗ್ಗಿ ವಾಸುದೇವ್‌ ಸಂದೇಶ ನೀಡಿದಂತೆಯೇ ವಿಡಿಯೊ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 16:16 IST
Last Updated 11 ಸೆಪ್ಟೆಂಬರ್ 2025, 16:16 IST
REUTERS/PRIYANSHU SINGH
   REUTERS/PRIYANSHU SINGH

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಆಧರಿಸಿ ಸದ್ಗುರು ಜಗ್ಗಿ ವಾಸುದೇವ್‌ ಅವರು ಸಂದೇಶ ನೀಡಿರುವಂತೆ ಸೃಷ್ಟಿಸಿದ್ದ ಡೀಪ್‌ ಫೇಕ್‌ ವಿಡಿಯೊದ ಮೂಲಕ ಸೈಬರ್ ವಂಚನೆ ನಡೆಸಲಾಗಿದ್ದು, ನಗರದ 57 ವರ್ಷದ ಮಹಿಳೆಯೊಬ್ಬರು ₹3.75 ಕೋಟಿ ಕಳೆದುಕೊಂಡಿದ್ದಾರೆ.

ಸಿ.ವಿ. ರಾಮನ್‌ ನಗರದ ಮಹಿಳೆ ವಂಚನೆಗೆ ಒಳಗಾದವರು.

ಸೈಬರ್ ಅಪರಾಧ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ದೂರುದಾರ ಮಹಿಳೆ ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಣೆ ಮಾಡುತ್ತಿದ್ದರು. ಕೃತಕಬುದ್ಧಿಮತ್ತೆ ತಂತ್ರಜ್ಞಾನ ಆಧರಿಸಿ ಸದ್ಗುರು ಜಗ್ಗಿ ವಾಸುದೇವ್‌ ಅವರು ಸಂದೇಶ ನೀಡಿದಂತೆಯೇ ಸೃಷ್ಟಿಸಿದ ಡೀಪ್‌ ಫೇಕ್‌ ವಿಡಿಯೊ ಅವರ ಕಣ್ಣಿಗೆ ಕಾಣಿಸಿತ್ತು.

‘ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯಲಿದೆ. ಈ ಕೆಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಹೆಸರು ನೋಂದಣಿ ಮಾಡಿಕೊಳ್ಳಿ. ಇ–ಮೇಲ್ ಹಾಗೂ ಮೊಬೈಲ್‌ ಸಂಖ್ಯೆ ನಮೂದಿಸಿ. ತಮ್ಮ ಆರ್ಥಿಕ ಸ್ಥಿತಿಯೂ ಉತ್ತಮವಾಗಲಿದೆ’ ಎಂದೂ ಆ ವಿಡಿಯೊದಲ್ಲಿ ಸದ್ಗುರು ಹೇಳಿದಂತೆ ತೋರಿಸಲಾಗಿತ್ತು. ಅದನ್ನು ನಂಬಿದ್ದ ದೂರುದಾರೆ, ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ್ದರು. ಕೆಲವೇ ಕ್ಷಣಗಳಲ್ಲಿ ವಾಲೀದ್ ಎಂಬಾತ ಕರೆ ಮಾಡಿ ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದ. ಝೂಮ್‌ ಆ್ಯಪ್‌ ಮೂಲಕ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ಸಿ.ಮೈಕಲ್ ಎಂಬಾತ ಕರೆ ಮಾಡಿ ಹೂಡಿಕೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿದ್ದ. ಫೆಬ್ರುವರಿ 25ರಿಂದ ಏಪ್ರಿಲ್‌ 23ರ ತನಕ ಮಹಿಳೆ ಒಟ್ಟು ₹3.75 ಕೋಟಿ ಹೂಡಿಕೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲವು ದಿನಗಳು ಕಳೆದ ಮೇಲೆ ಲಾಭವನ್ನು ಪಡೆದುಕೊಳ್ಳಲು ಮಹಿಳೆ ಮುಂದಾಗಿದ್ದರು. ಅದು ಸಾಧ್ಯವಾಗಿರಲಿಲ್ಲ. ಬಳಿಕ, ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ’ ಎಂದು ಗೊತ್ತಾಗಿದೆ.

‘ವಂಚನೆ ಆಗಿರುವ ಹಣವನ್ನು ವಾಪಸ್ ಪಡೆದುಕೊಳ್ಳುವುದು ಕಷ್ಟ. ಮಹಿಳೆ ಹಣ ವರ್ಗಾವಣೆ ಮಾಡಿರುವ ಬ್ಯಾಂಕ್‌ ಖಾತೆಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಆ ಖಾತೆಗಳಲ್ಲಿ ವಹಿವಾಟು ಸ್ಥಗಿತ ಮಾಡಲು ಪ್ರಯತ್ನಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.