ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಅಸಾಂವಿಧಾನಿಕವಾಗಿರುವ ಬುದ್ಧಗಯಾ ಟ್ರಸ್ಟ್ (ಬಿ.ಟಿ) ಕಾಯ್ದೆ–1949 ರದ್ದುಗೊಳಿಸಬೇಕು. ಬಿಹಾರದ ಬುದ್ಧಗಯಾ ಮಹಾಬೋಧಿ ಮಹಾವಿಹಾರದ ಆಡಳಿತದ ಸಂಪೂರ್ಣ ಜವಾಬ್ದಾರಿಯನ್ನು ಬೌದ್ಧರಿಗೆ ನೀಡುವಂತೆ ಆಗ್ರಹಿಸಿ ಜುಲೈ 25ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬೌದ್ಧರ ವೇದಿಕೆ ತಿಳಿಸಿದೆ.
ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮೂರ್ತಿ ಮಾತನಾಡಿ, ‘ಬೌದ್ಧ ಬಿಕ್ಕುಗಳ ಸಂಘವು 160 ದಿನಗಳಿಂದ ಬುದ್ಧಗಯಾದಲ್ಲಿ ಧರಣಿ ನಡೆಸುತ್ತಿದೆ. ಸ್ವಾತಂತ್ರ್ಯ ನಂತರ ಬಿ.ಟಿ–1949 ಕಾಯ್ದೆ ರಚಿಸಲಾಗಿತ್ತು. ಈ ಕಾಯ್ದೆಯಡಿ ಬಿಹಾರದ ಗಯಾ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಾಲ್ವರು ಬೌದ್ಧರು, ನಾಲ್ವರು ಹಿಂದೂಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಇದರಿಂದ ಬೌದ್ಧರಿಗೆ ಅನ್ಯಾಯವಾಗಿದೆ’ ಎಂದು ದೂರಿದರು.
‘ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂ ಪ್ರಧಾನ ಕಾರ್ಯದರ್ಶಿ ಆಕಾಶ್ ಲಾಮ್ ಅವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಇದೇ 25ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಧರಣಿ ಸತ್ಯಾಗ್ರಹದಲ್ಲಿ ರಾಜ್ಯದಿಂದ ನೂರಾರು ಜನ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.