ADVERTISEMENT

ಪ್ರಶ್ನೆಪತ್ರಿಕೆ ನೀಡುವುದಾಗಿ ಹಣಕ್ಕೆ ಬೇಡಿಕೆ: ಪಿಎಸ್‌ಐ ಲಿಂಗಯ್ಯ ತೀವ್ರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 20:50 IST
Last Updated 20 ಜನವರಿ 2024, 20:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಇದೇ 21ರಂದು ನಡೆಯಲಿರುವ ವಾಣಿಜ್ಯ ತೆರಿಗೆ ಇಲಾಖೆಯ ಇನ್‌ಸ್ಪೆಕ್ಟರ್ (ಸಿಟಿಐ) ಹಾಗೂ ಇದೇ 23ರಂದು ನಡೆಯುವ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಹುದ್ದೆಯ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

‘ಪ್ರಶ್ನೆ ಪತ್ರಿಕೆ ನೀಡುವುದಾಗಿ ಅಭ್ಯರ್ಥಿಗಳಿಗೆ ಆಮಿಷವೊಡ್ಡಿ ಹಣಕ್ಕೆ ಬೇಡಿಕೆ ಸಲ್ಲಿಸಿದ್ದರು’ ಎಂಬ ಆರೋಪದ ಮೇಲೆ ಗುಪ್ತಚರ ವಿಭಾಗದ ಪಿಎಸ್‌ಐ ಲಿಂಗಯ್ಯ ಅವರನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ಶನಿವಾರವೂ ತೀವ್ರ ವಿಚಾರಣೆಗೆ ಒಳಪಡಿಸಿದರು.

ADVERTISEMENT

ಪಿಎಸ್‌ಐ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ, ಅಭ್ಯರ್ಥಿಗಳು ಚಂದ್ರಾಲೇಔಟ್‌ ಠಾಣೆ ಎದುರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದರು. ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದ್ದರು.

‘ರಹಸ್ಯ ಕಾರ್ಯಾಚರಣೆ?’: ‌‘‌ಕಳೆದ ಬಾರಿ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಸಿಐಡಿ ತನಿಖೆಯಿಂದ ಗೊತ್ತಾಗಿತ್ತು. ಈ ಬಾರಿ ಪರೀಕ್ಷೆಯಲ್ಲೂ ಕೆಲವು ಅಭ್ಯರ್ಥಿಗಳು ಅಕ್ರಮ ಎಸಗಲು ಮುಂದಾಗಿದ್ದರು’ ಎಂಬ ಮಾಹಿತಿ ಮೇರೆಗೆ ಲಿಂಗಯ್ಯ ಅವರೇ ರಹಸ್ಯ ಕಾರ್ಯಾಚರಣೆ ನಡೆಸಲು ಹೋಗಿದ್ದರು ಎನ್ನಲಾಗಿದೆ. ಆದರೂ ಲಿಂಗಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಪರೀಕ್ಷಾರ್ಥಿಗಳು ಅಕ್ರಮ ಎಸಗಲು ಮುಂದಾಗಿದ್ದಾರೆ ಎಂಬ ಮಾಹಿತಿ ದೊರೆತ ಮೇಲೆ ಲಿಂಗಯ್ಯ ಅವರು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೇ? ಅವರ ಸೂಚನೆ ಮೇರೆಗೆ ರಹಸ್ಯ ಕಾರ್ಯಾಚರಣೆ ನಡೆಸಿದ್ದರೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ವಾಟ್ಸ್‌ಆ್ಯಪ್‌ ಚಾಟಿಂಗ್‌, ಆಡಿಯೊ ಎಲ್ಲವನ್ನೂ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುವುದು. ತಾಂತ್ರಿಕವಾಗಿ ಪರಿಶೀಲನೆ ನಡೆಲಾಗುವುದು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೊದಲ್ಲಿ ಇಬ್ಬರು ಅಭ್ಯರ್ಥಿಗಳ ಬಳಿ ಮುಂಗಡವಾಗಿ ₹10 ಲಕ್ಷ ಮುಂಗಡ ಹಣ ಪಡೆದುಕೊಳ್ಳಲಾಗಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಹಣ ನೀಡಿದ ಅಭ್ಯರ್ಥಿಗಳು ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.

‘ಲಿಂಗಯ್ಯ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊದಲ್ಲಿ, ಈ ಹಿಂದಿನ ಪಿಎಸ್‌ಐ ಪರೀಕ್ಷೆ ಅಕ್ರಮದ ಬಗ್ಗೆಯೂ ಚರ್ಚೆ ನಡೆದಿದೆ. ನೇಮಕಾತಿ ವಿಭಾಗದ ಡಿವೈಎಸ್‌ಪಿ ಆಗಿದ್ದ ಶಾಂತಕುಮಾರ್ ಹೆಸರು ಪ್ರಸ್ತಾಪಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.