ADVERTISEMENT

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಜಾಗೊಳಿಸಲು ಆಗ್ರಹ

ಪರಿಷ್ಕೃತ ಪಠ್ಯಕ್ಕೆ ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರಿಂದ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಮೇ 2022, 20:19 IST
Last Updated 25 ಮೇ 2022, 20:19 IST
ಸಭೆಯಲ್ಲಿ ಎಚ್.ಎಸ್. ರಾಘವೇಂದ್ರ ರಾವ್ ಮಾತನಾಡಿದರು. (ಎಡದಿಂದ) ಶ್ರೀಪಾದ್ ಭಟ್, ಬಂಜಗೆರೆ ಜಯಪ್ರಕಾಶ್‌, ಪ್ರೊ.ರಾಜೇಂದ್ರ ಚೆನ್ನಿ, ಮರುಳ ಸಿದ್ದಪ್ಪ ಹಾಗೂ ವಿ.ಪಿ. ನಿರಂಜನಾರಾಧ್ಯ ಇದ್ದಾರೆ -ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಎಚ್.ಎಸ್. ರಾಘವೇಂದ್ರ ರಾವ್ ಮಾತನಾಡಿದರು. (ಎಡದಿಂದ) ಶ್ರೀಪಾದ್ ಭಟ್, ಬಂಜಗೆರೆ ಜಯಪ್ರಕಾಶ್‌, ಪ್ರೊ.ರಾಜೇಂದ್ರ ಚೆನ್ನಿ, ಮರುಳ ಸಿದ್ದಪ್ಪ ಹಾಗೂ ವಿ.ಪಿ. ನಿರಂಜನಾರಾಧ್ಯ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯನ್ನು ರದ್ದು ಗೊಳಿಸಿ, ಎಲ್ಲ ಶಿಫಾರಸುಗಳನ್ನು ತಿರಸ್ಕರಿಸಬೇಕು. ಈ ಹಿಂದಿನ ಪಠ್ಯಗಳನ್ನೇ ಮುಂದುವರಿಸಬೇಕು.’

ಇವು ಸಾಹಿತಿಗಳು, ಚಿಂತಕರು ಹಾಗೂ ಶಿಕ್ಷಣ ತಜ್ಞರ ಒಕ್ಕೊರಲ ಆಗ್ರಹ. ಜಾಗೃತ ನಾಗರಿಕರು ಕರ್ನಾಟಕ ಸಂಘಟನೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಪಠ್ಯಪುಸ್ತಕ ರಚನೆ, ಪರಿಷ್ಕರಣೆ–ಮರು ಪರಿಷ್ಕರಣೆ’ ಬಗ್ಗೆ ಸಮಾಲೋಚನೆ ಸಭೆ ನಡೆಸಿತು.

ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಎಚ್.ಎಸ್. ರಾಘವೇಂದ್ರ ರಾವ್, ರಾಜೇಂದ್ರ ಚೆನ್ನಿ, ವಸುಂಧರಾ ಭೂಪತಿ, ಬಿ.ಟಿ. ಲಲಿತಾ ನಾಯಕ್, ಟಿ.ಆರ್. ಚಂದ್ರಶೇಖರ್, ಪ್ರಜ್ವಲ್ ಶಾಸ್ತ್ರಿ, ವಿ.ಪಿ. ನಿರಂಜನಾರಾಧ್ಯ, ಬಂಜಗೆರೆ ಜಯಪ್ರಕಾಶ್, ಮಾವಳ್ಳಿ ಶಂಕರ್, ಇಂದೂಧರ ಹೊನ್ನಾಪುರ, ಬಿ. ರಾಜಶೇಖರಮೂರ್ತಿ, ಬಿ. ಶ್ರೀಪಾದ್ ಭಟ್ ಮತ್ತಿತರರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಮಕ್ಕಳ ಕಲಿಕೆ ನಷ್ಟವಾಗಿದೆ. ಇಂತಹ ಬಿಕ್ಕಟ್ಟಿನಲ್ಲಿ ಪಠ್ಯಕ್ರಮ ಪರಿಷ್ಕರಣೆಯಂತಹ ಅನಗತ್ಯ ಪ್ರಯೋಗಗಳಿಗೆ ಕೈಹಾಕಬಾರದಿತ್ತು. ಪರಿಷ್ಕರಣೆಯಿಂದ ಕಲಿಕೆಯ ನಷ್ಟ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ, ಪರಿಷ್ಕರಣೆ ಸಮಿತಿಯ ಅರ್ಹತೆಯ ವಿವಿಧ ನೆಲೆಗಳನ್ನು ಪ್ರಶ್ನಿಸಬೇಕು. ಅನಗತ್ಯವಾಗಿ ಮರು ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜೀನಾಮೆಗೆ ಒತ್ತಾಯಿಸಬೇಕು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ಪಠ್ಯಕ್ರಮವನ್ನು ಮನಸೋ ಇಚ್ಛೆ ಬದಲಾಯಿಸಲು ಅವಕಾಶ ಇಲ್ಲದ ವ್ಯವಸ್ಥೆ ಜಾರಿಗೆ ಬರಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಯಿತು.

‘ಸಾಮಾಜಿಕ ನ್ಯಾಯವನ್ನು ಪಾಲಿಸುವ, ಲಿಂಗ ಸಮಾನತೆಯನ್ನು ಗೌರವಿಸುವ, ಬಹುಸಂಸ್ಕೃತಿ ಮತ್ತು ಕನ್ನಡದ ಅಸ್ಮಿತೆಯನ್ನು ಒಳಗೊಂಡ ಮಾದರಿ ಪಠ್ಯ ಕ್ರಮವನ್ನು ರೂಪಿಸಬೇಕು’ ಎಂದು ತಜ್ಞರು ಸಲಹೆ ನೀಡಿದರು.

ನಿರಂಜನಾರಾಧ್ಯ, ‘ಹಿಂದೆ ಪುಸ್ತಕ ಬರೆದವರೆಲ್ಲ ದೇಶದ್ರೋಹಿಗಳು, ಈಗ ಬರೆದವರು ದೇಶ ಪ್ರೇಮಿಗಳು ಎಂದು ಬಿಂಬಿಸುವುದು ಸರಿಯಲ್ಲ. ಪಠ್ಯ ಪರಿಷ್ಕರಣೆಯ ನೇತೃತ್ವವನ್ನು ಎನ್‌ಸಿಇಆರ್‌ಟಿ ಮತ್ತು ಡಿಎಸ್‌ಇಆರ್‌ಟಿ ವಹಿಸಬೇಕು. ಆದರೆ, ಹಾಲಿ ಸಮಿತಿ ಯಲ್ಲಿ ಎನ್‌ಸಿಇಆರ್‌ಟಿ, ಡಿಎಸ್‌ಇಆರ್‌ಟಿಪ್ರತಿನಿಧಿಗಳಿಲ್ಲ.ಪಠ್ಯಪುಸ್ತಕದ ಪರಿಷ್ಕರಣೆಯ ಚರ್ಚೆಯು ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿಗಳ ಗುಂಪಿನ ಸಂಘರ್ಷ ದಂತಿದೆ’ ಎಂದರು. ಟಿ.ಆರ್. ಚಂದ್ರಶೇಖರ್, ‘ಕರ್ನಾಟಕದ ಶಿಕ್ಷಣ ವ್ಯವಸ್ಥೆ ಪ್ರಯೋಗ ಮಾಡುವ ಸ್ಥಿತಿಯಲ್ಲಿಲ್ಲ. ಶಿಕ್ಷಣವನ್ನು ಬಲ ಪಡಿಸುವ ಬಗ್ಗೆ ಯೋಚನೆ ಮಾಡಬೇಕು. ಪ್ರಯೋಗಗಳನ್ನು ಬಿಟ್ಟು, ಶಿಕ್ಷಣ ವಂಚಿತ ಮಕ್ಕಳ ಭವಿಷ್ಯ ಕಟ್ಟಬೇಕು’ ಎಂದರು.

ಬಂಜಗೆರೆ ಜಯಪ್ರಕಾಶ, ‘ಶಿಕ್ಷಣ ಹಾಗೂ ಪಠ್ಯದ ಜತೆಗೆ ಕುಚೇಷ್ಟೆ ಮಾಡಲಾಗುತ್ತಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರನ್ನು ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

'ಶಿಕ್ಷಣದಿಂದ ವಂಚಿಸುವ ಹುನ್ನಾರ'
‘ಶಿಕ್ಷಣ ವ್ಯವಸ್ಥೆ ಕುಸಿದಲ್ಲಿ ಸಾಮಾಜಿಕ ಬದುಕು ಕೂಡ ಕುಸಿಯುತ್ತದೆ. ಸಹಸ್ರಾರು ವರ್ಷಗಳಿಂದ ಶಿಕ್ಷಣ ವಂಚಿತವಾದ ಸಮುದಾಯಗಳು 70 ವರ್ಷಗಳ ಅವಧಿಯಲ್ಲಿ ಕಡ್ಡಾಯ ಶಿಕ್ಷಣದಿಂದ ಬೆಳಕು ಕಂಡಿದ್ದವು. ಈಗ ಆ ಬೆಳಕನ್ನು ಆರಿಸಲಾಗುತ್ತಿದೆ. ಹಾಲಿ ಸಮಿತಿಯನ್ನು ವಜಾಗೊಳಿಸಬೇಕು’ ಎಂದು ಸಾಹಿತಿ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಆಗ್ರಹಿಸಿದರು.

ಲೇಖಕಿ ವಸುಂಧರಾ ಭೂಪತಿ, ‘ಮಹಿಳಾ, ದಲಿತ, ಮುಸ್ಲಿಂ ಸಂವೇದನೆ ಪರಿಷ್ಕೃತ ಪಠ್ಯಗಳಲ್ಲಿಲ್ಲ. ಮಹಿಳಾ ಪ್ರಾತಿನಿಧ್ಯವನ್ನು ಕಡೆಗಣಿಸಲಾಗಿದೆ. ಬನ್ನಂಜೆ ಗೋವಿಂದಾಚಾರ್ಯರ ‘ಸುಖನಾಥನ ಉಪದೇಶ’ ಅಧ್ಯಾಯದಲ್ಲಿ ಲಕ್ಷ್ಮೀ ಬಗ್ಗೆ ಕೆಟ್ಟದಾಗಿ ವರ್ಣಿಸಲಾಗಿದೆ. ಕೀಳು ಮಟ್ಟದಲ್ಲಿ ಹೆಣ್ಣನ್ನು ಬಿಂಬಿಸುವ ಪಠ್ಯ ಅದಾಗಿದೆ. ಅದನ್ನು ರದ್ದುಮಾಡಬೇಕು’ ಎಂದು ಒತ್ತಾಯಿಸಿದರು.

*

ಮನೆಗೆ ಮತ್ತು ಮನಸ್ಸಿಗೆ ಬೆಂಕಿ ಹಚ್ಚುವ ಕೆಲಸ ಒಟ್ಟಿಗೆ ನಡೆಯುತ್ತಿದೆ. ಪರಿಷ್ಕೃತ ಪಠ್ಯಕ್ಕೆ ಪೂರಕ ಪಠ್ಯ ನಿರ್ಮಾಣ ಮಾಡುವ ಅವಕಾಶ ನಮಗಿದ್ದು, ಅದನ್ನು ಮಾಡೋಣ.
-ಎಚ್.ಎಸ್‌. ರಾಘವೇಂದ್ರರಾವ್, ವಿಮರ್ಶಕ

*

ಸಿದ್ಧಾಂತಗಳನ್ನು ಅವಸರದಲ್ಲಿ ಹೇರುವ ಪ್ರಕ್ರಿಯೆ ನಡೆಯುತ್ತಿದೆ. ಪಠ್ಯವು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಇರಬೇಕು. ಪಠ್ಯದಲ್ಲಿ ತಪ್ಪಿದ್ದರೆ ತಿರಸ್ಕರಿಸುವ ಕೆಲಸ ಆಗಬೇಕು.
-ರಾಜೇಂದ್ರ ಚೆನ್ನಿ, ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.