ADVERTISEMENT

ಬ್ರಾಹ್ಮಣರೇ ತುಂಬಿರುವ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ವಜಾಗೊಳಿಸಿ: ದಸಂಸ

​ಪ್ರಜಾವಾಣಿ ವಾರ್ತೆ
Published 26 ಮೇ 2022, 20:00 IST
Last Updated 26 ಮೇ 2022, 20:00 IST
   

ಬೆಂಗಳೂರು: ‘ಬ್ರಾಹ್ಮಣರೇ ತುಂಬಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಬೇಕು ಮತ್ತು ಇಷ್ಟೆಲ್ಲಾ ರಾದ್ಧಾಂತಗಳಿಗೆ ಕಾರಣವಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ದಸಂಸ ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ಲಕ್ಷೀನಾರಾಯಣ ನಾಗವಾರ, ‘ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ನಿಲುವುಗಳ ಬಗ್ಗೆ ಮುಖ್ಯಮಂತ್ರಿಯ ಮೌನ ಮತ್ತು ಸಮರ್ಥನೆಯನ್ನು ನಾವು ಖಂಡಿಸುತ್ತೇವೆ. ಅವರು ಮೌನ ಮುರಿದು ಸಂವಿಧಾನ ವಿರೋಧಿ ನಿರ್ಧಾರಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದರು.

‘ಸಮಿತಿಯ ಏಳು ಜನರಲ್ಲಿ ಎಲ್ಲರೂ ಬ್ರಾಹ್ಮಣರು. ಆದ್ದರಿಂದಲೇ 10ನೇ ತರಗತಿ ಪಠ್ಯದಲ್ಲಿ ಸೇರಿಸಲಾದ 9 ಪಠ್ಯಗಳು ಬ್ರಾಹ್ಮಣ ಲೇಖಕರದ್ದೇ ಆಗಿವೆ. ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗಗಳ ಲೇಖಕರ ಪಠ್ಯಗಳನ್ನು ಕೈಬಿಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಜಾತಿ ಪದ್ಧತಿ, ವರ್ಣಾಶ್ರಮ ಪ್ರೋತ್ಸಾಹಿಸುವ ಆರ್‌ಎಸ್‌ಎಸ್‌ ಸ್ಥಾಪಕ ಹೆಡಗೇವಾರ್‌ಬರಹವನ್ನು ಪಠ್ಯದಲ್ಲಿ ಸೇರಿಸುವ ಮೂಲಕ ಮಕ್ಕಳಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಚಕ್ರವರ್ತಿ ಸೂಲಿಬೆಲೆ ಎಂಬ ಸುಳ್ಳುಗಾರನ ಬರಹವನ್ನೂ ಪಠ್ಯದಲ್ಲಿ ಸೇರಿಸಲಾಗಿದೆ. ಇದರಿಂದ ಮಕ್ಕಳ ಮನಸ್ಥಿತಿ ಏನಾಗುತ್ತದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಪಠ್ಯಪುಸ್ತಕದ ಮರುಪರಿಶೀಲನೆ ನಡೆಯಲಿ’
​​​​​​​ಬೆಂಗಳೂರು
: ‘ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ನಿವಾರಣೆಗೆ ಉನ್ನತ ಮಟ್ಟದ ಸಮಿತಿ ರಚಿಸಿ, ಪಠ್ಯಪುಸ್ತಕಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕು’ ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

‘ಪಠ್ಯಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿದಂತೆ ಪರ–ವಿರೋಧದ ನಿಲುವುಗಳು ತೀವ್ರತೆ ಪಡೆದುಕೊಳ್ಳುತ್ತಿವೆ. ಸಾಂಸ್ಕೃತಿಕ ಸಂಘರ್ಷಗಳಿಗೆ ನಾಂದಿಯಾಗುತ್ತಿವೆ. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಸಿದ್ಧಪಡಿಸಿರುವ ಪಠ್ಯಗಳನ್ನು ಮರುಪರಿಶೀಲನೆ ನಡೆಸಲು ಶಿಕ್ಷಣ ತಜ್ಞರ ಉನ್ನತ ಮಟ್ಟದ ಸಮಿತಿ ನೇಮಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಪಠ್ಯಗಳಲ್ಲಿ ಎಡ–ಬಲ ಮುಖ್ಯವಲ್ಲ. ಮಕ್ಕಳು ನಾಡನ್ನು ಪ್ರೀತಿಸುವ, ದೇಶವನ್ನು ಗೌರವಿಸುವ, ಸಂಸ್ಕೃತಿ–ಸಂಸ್ಕಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಮಾನವೀಯ ಮೌಲ್ಯಗಳನ್ನು ರೂಪಿಸಿಕೊಳ್ಳುವ ಪಠ್ಯಗಳು ಬೇಕಾಗಿವೆ. ಹೀಗಾಗಿ, ಸೌಹಾರ್ದದಿಂದ ಈ ಸಮಸ್ಯೆ ಪರಿಹರಿಸಲು ಎಲ್ಲರೂ ಸಹಕರಿಸಬೇಕು’ ಎಂದು‍ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.