ADVERTISEMENT

ಆಂಬುಲೆನ್ಸ್‌ ನೌಕರರಿಗೆ ಸೇವಾ ಭದ್ರತೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 20:35 IST
Last Updated 4 ಮಾರ್ಚ್ 2023, 20:35 IST
   

ಬೆಂಗಳೂರು: ಆಂಬುಲೆನ್ಸ್‌ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಖಿಲ ಕರ್ನಾಟಕ 108 ಆಂಬುಲೆನ್ಸ್‌ ನೌಕರರ ಹಿತರಕ್ಷಣಾ ಸಂಘ ಆಗ್ರಹಿಸಿದೆ.

‘ಆರೋಗ್ಯ ಇಲಾಖೆಯ ಆರೋಗ್ಯ ಕವಚ 108 ಆಂಬುಲೆನ್ಸ್‌ ಯೋಜನೆ ಅಡಿಯಲ್ಲಿ ನೂತನ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ. ಸದ್ಯ ಈ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು ಮತ್ತು ಸಿಬ್ಬಂದಿಯನ್ನೇ ಮುಂದುವರೆಸಬೇಕು. 2016ರಲ್ಲಿ ಮುಷ್ಕರದಲ್ಲಿ ಭಾಗಿಯಾದ 130 ಜನರನ್ನು ಮರುನೇಮಕ ಮಾಡಿಕೊಳ್ಳಲು ಸರ್ಕಾರ ಆದೇಶ ನೀಡಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸಂಘದ ಗೌರವ ಅಧ್ಯಕ್ಷ ಶಿವಪ್ರಕಾಶ ರೆಡ್ಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಯೋಜನೆಯ ಅಡಿಯಲ್ಲಿ 2008ರಿಂದ ಇದುವರೆಗೂ ರಾಜ್ಯದಾದ್ಯಂತ 3000ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನೂತನ ಟೆಂಡರ್‌ ಪ್ರಕ್ರಿಯೆಯಲ್ಲಿ ಸೇವಾ ಹಿರಿತನವನ್ನು ಪರಿಗಣಿಸಿ, ಸದ್ಯ ನೀಡುತ್ತಿರುವ ವೇತನದಲ್ಲಿ ಯಾವುದೇ ರೀತಿಯ ಬದಲಾವಣೆಯಾಗದಂತೆ ಹೆಚ್ಚುವರಿ ವೇತನ ನೀಡಬೇಕು. ಕಾರ್ಮಿಕ ಕಾಯ್ದೆ ಅಡಿಯಲ್ಲಿ ಬರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ ಸುಧಾಕರ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ’ ಎಂದರು.

ADVERTISEMENT

ರಾಜ್ಯ ಘಟಕದ ಅಧ್ಯಕ್ಷ ಬಿ. ಮಲ್ಲಿಕಾರ್ಜುನ್, ಉಪಾಧ್ಯಕ್ಷ ಹನುಮಂತಪ್ಪ, ಮಂಜುನಾಥ್ ಪ್ರಸಾದ್, ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.