ಬೆಂಗಳೂರು: ‘ಪರಿಷ್ಕೃತ ಸರೋಜಿನಿ ಮಹಿಷಿ ವರದಿಯನ್ನು ಇದೇ ಫೆಬ್ರವರಿಯಲ್ಲಿ ನಡೆಯಲಿರುವ ರಾಜ್ಯ ಬಜೆಟ್ ಅಧಿವೇಶನದಲ್ಲಿ ಮಂಡಿಸಿ, ಕಾನೂನು ಬಲ ತಂದು ಕೊಡಬೇಕು’ ಎಂದು ಕನ್ನಡ ಪರ ಹೋರಾಟಗಾರರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಆಗ್ರಹಿಸಿದ್ದಾರೆ.
ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ. ಇದಕ್ಕೆ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ಸಾಹಿತಿ ದೊಡ್ಡರಂಗೇಗೌಡ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಲೇಖಕಿ ವಿಜಯಾ, ವಕೀಲೆ ಹೇಮಲತಾ ಮಹಿಷಿ, ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ಸಂಶೋಧಕ ಆರ್. ಶೇಷಶಾಸ್ತ್ರಿ ಹಾಗೂ ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಸಹಿ ಹಾಕಿ, ಆಗ್ರಹಿಸಿದ್ದಾರೆ.
‘ಪರಿಷ್ಕೃತ ಮಹಿಷಿ ವರದಿಯನ್ನು 2017ರ ಫೆಬ್ರವರಿಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದನ್ನು ನೀಡಿ ಏಳು ವರ್ಷಗಳಾದರೂ ಸದನದಲ್ಲಿ ಮಂಡಿಸಿ, ಕಾನೂನು ಬಲ ತಂದುಕೊಡುವ ಕೆಲಸವಾಗಿಲ್ಲ. ಪರಿಷ್ಕೃತ ವರದಿಯು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬಹುದಾದ 14 ಅಂಶಗಳು, ಕೇಂದ್ರ ಸರ್ಕಾರ ಅನುಷ್ಠಾನ ಗೊಳಿಸಬೇಕಿರುವ 7 ಅಂಶಗಳನ್ನು ಒಳಗೊಂಡಿದೆ. ಈ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಅನುಸರಿಸಬೇಕಾದ ಮಾರ್ಗವನ್ನೂ ಸ್ಪಷ್ಟವಾಗಿ ವರದಿಯಲ್ಲಿ ಉಲ್ಲೇಖಿಸಿದೆ. ಪರಿಷ್ಕೃತ ಮಹಿಷಿ ವರದಿಯನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಬೇಕು. ಇದಕ್ಕೆ ವಿರೋಧ ಪಕ್ಷಗಳೂ ಒಪ್ಪಿಗೆ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ತಿಳಿಸಿದ್ದಾರೆ.
‘ಪರಿಷ್ಕೃತ ಮಹಿಷಿ ವರದಿಗೆ ಕಾನೂನು ಬಲ ಬಂದರೆ ಕನ್ನಡಿಗರಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ಸಿಗುತ್ತದೆ. ಈ ವರದಿ ಜಾರಿಗೆ ಬರದಿರಲು ಅದು ಕಾಯ್ದೆ ಆಗದಿದ್ದೇ ಕಾರಣ ಎನ್ನುವುದನ್ನು ನ್ಯಾಯಾಲಯ ಹೇಳಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.