ADVERTISEMENT

ಡೆಂಗಿ: ರಾಜ್ಯದಲ್ಲಿ ಕಡಿವಾಣ ಬೆಂಗಳೂರಿನಲ್ಲಿ ಉಲ್ಬಣ!

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:15 IST
Last Updated 9 ಜುಲೈ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಡೆಂಗಿ ನಿಯಂತ್ರಣದಲ್ಲಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕಿಂತ ಎಂಟು ಪಟ್ಟು ಹೆಚ್ಚಿದೆ!

ಕಳೆದ ವರ್ಷದ ಮೇ–ಜೂನ್‌ ಸಂದರ್ಭಕ್ಕೆ ಹೋಲಿಸಿದರೆ, ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಡೆಂಗಿ ಪ್ರಕರಣಗಳು ಕಾಣಿಸಿಕೊಂಡಿವೆ.2018ರ ಮೇ ತಿಂಗಳಲ್ಲಿ 53 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದರೆ, 2019ರ ಈ ಸಂಖ್ಯೆ 349ಕ್ಕೆ ಏರಿದೆ! ಜೂನ್‌ನಲ್ಲಿ ಈ ಸಂಖ್ಯೆ 729ಕ್ಕೂ ಹೆಚ್ಚು. ಈ ಬಾರಿ ಅಧಿಕ ಸಂಕೀರ್ಣ ಪ್ರಕರಣಗಳು ವರದಿಯಾಗಿದ್ದರೆ, ಸಾವಿನ ಪ್ರಮಾಣ ಕೂಡ ಅಧಿಕವಾಗಿದೆ ಎಂದು ವೈದ್ಯರು ಹೇಳುತ್ತಾರೆ.

ಮಳೆಯಿಂದಾಗಿ ನಗರದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತದೆ. ಇದು ಡೆಂಗಿ ಹೆಚ್ಚಾಗಲು ಕಾರಣ. ರಕ್ತದ ಪ್ಲೇಟ್‌ಲೆಟ್‌ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬಂದಿದ್ದು, ಬಹಳಷ್ಟು ರೋಗಿಗಳಲ್ಲಿ ಲಿವರ್‌ನ ಉರಿಯೂತ ಕಂಡು ಬಂದಿದೆ ಎಂದು ಹೇಳುತ್ತಾರೆ.

ADVERTISEMENT

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮಲೇರಿಯಾ, ಡೆಂಗಿ, ಚಿಕೂನ್‍ಗುನ್ಯಾ ನಿಯಂತ್ರಣ ಮತ್ತು ನಿವಾರಣೆಗಾಗಿ
ವಲಯವಾರು ಅಂತರ್‌ ಇಲಾಖಾ ಅಧಿಕಾರಿಗಳ ಸಭೆ ನಡೆಸಲಾಗಿದೆ. ವಲಯ ಮಟ್ಟದಲ್ಲಿ ಬಿಬಿಎಂಪಿ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ತಪಾಸಣೆ ಮಾಡಿ, ನೀರಿನ ಸೋರುವಿಕೆ, ಕಟ್ಟಿಕೊಂಡಿರುವ ಒಳಚರಂಡಿ, ಕುಡಿಯುವ ನೀರು ಕಲುಷಿತವಾಗುವುದನ್ನು ಗುರುತಿಸಿ ಸರಿಪಡಿಸಲಾಗುತ್ತಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

‘ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಅವಶ್ಯ ಔಷಧಿ ಮತ್ತು ಪ್ರಚಾರ ಸಾಮಗ್ರಿ ಇಡಲಾಗಿದೆ. ರಸ್ತೆ ಬದಿಯಲ್ಲಿ ಆಹಾರ ಮತ್ತು ಕತ್ತರಿಸಿ ತೆರೆದಿಟ್ಟ ಹಣ್ಣುಗಳ ಮಾರಾಟ ತಡೆಗಟ್ಟಲು ಕ್ರಮ ಜರುಗಿಸಲಾಗಿದ್ದು, ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ದೊರೆಯುವಂತೆ ಕ್ರಮ ಜರುಗಿಸಲಾಗಿದೆ’ ಎಂದು ಅವರು ತಿಳಿಸುತ್ತಾರೆ.

ಡೆಂಗಿ ಲಕ್ಷಣಗಳು
* ನಿರಂತರವಾಗಿ ಜ್ವರ
* ತಲೆ, ಕೀಲು ಮತ್ತು ಮಾಂಸಖಂಡ ನೋವು
* ವಾಕರಿಕೆ ಹಾಗೂ ದೇಹದಲ್ಲಿ ಬೊಬ್ಬೆ
* ಬಿಳಿ ರಕ್ತಕಣಗಳ ಸಂಖ್ಯೆ ಕುಸಿತ

ಎಚ್ಚರಿಕೆ ಕ್ರಮಗಳು
* ತೆರೆದ ತೊಟ್ಟಿಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಣೆ ಮಾಡಬಾರದು
* 3–4 ದಿನಕ್ಕೆ ಒಮ್ಮೆಯಾದರೂ ತೊಟ್ಟಿಗಳನ್ನು ಶುಚಿಗೊಳಿಸಬೇಕು
* ಕಾಯಿಸಿ, ಆರಿಸಿದ ನೀರನ್ನೇ ಕುಡಿಯಬೇಕು
* ತಾಜಾ ಆಹಾರವನ್ನೇ ಸೇವಿಸಬೇಕು
* ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಲು ಮೈತುಂಬಾ ಬಟ್ಟೆ ಧರಿಸಬೇಕು
* ಮಲಗುವಾಗ ಸೊಳ್ಳೆ ಪರದೆ ಬಳಸಬೇಕು

*
ರಾಜ್ಯದಲ್ಲಿ ಡೆಂಗಿ ನಿಯಂತ್ರಣದಲ್ಲಿದೆ. ರೋಗ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
-ಡಾ. ಮಹಮ್ಮದ್‌ ಷರೀಫ್‌, ಆರೋಗ್ಯ ಇಲಾಖೆ ಸಂಶೋಧನಾಧಿಕಾರಿ

*
ಎಂಟು ವಲಯಗಳ ಪೈಕಿ ಪೂರ್ವ ಮತ್ತು ಮಹದೇವಪುರ ವಲಯದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ನಿಯಂತ್ರಣ ಕೈಗೊಳ್ಳಲಾಗುತ್ತಿದೆ.
-ಮನೋರಂಜನ್‌ ಹೆಗ್ಡೆ, ಬಿಬಿಎಂಪಿ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.