ಡೆಂಗಿ
ಬೆಂಗಳೂರು: ಡೆಂಗಿ ಜ್ವರದಿಂದ ರಾಜ್ಯದಲ್ಲಿ ಇಬ್ಬರು ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದೆ. ಇದರಿಂದಾಗಿ ಡೆಂಗಿ ಮರಣ ಪ್ರಕರಣಗಳ ಒಟ್ಟು ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ದಾವಣಗೆರೆ ಹಾಗೂ ಧಾರವಾಡದಲ್ಲಿ ತಲಾ ಒಬ್ಬರು ಡೆಂಗಿಯಿಂದ ಮರಣ ಹೊಂದಿರುವುದು ಖಚಿತಪಟ್ಟಿದೆ. ರಾಜ್ಯದ ಕೆಲವೆಡೆ ಡೆಂಗಿ ಶಂಕಿತ ಮರಣ ಪ್ರಕರಣಗಳು ವರದಿಯಾದರೂ, ಈ ಪ್ರಕರಣಗಳ ‘ಸಾವಿನ ಲೆಕ್ಕಗಳ ವರದಿ’ (ಡೆತ್ ಆಡಿಟ್) ಸಿದ್ಧಗೊಂಡು, ಇಲಾಖೆಗೆ ಸಲ್ಲಿಕೆಯಾದ ಬಳಿಕ ಅಧಿಕೃತವಾಗಿ ಘೋಷಿಸಲಾಗುತ್ತಿದೆ.
ರಾಜ್ಯದಲ್ಲಿ ಶನಿವಾರ ಹೊಸದಾಗಿ 196 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಸದ್ಯ 1,229 ಡೆಂಗಿ ಸಕ್ರಿಯ ಪ್ರಕರಣಗಳಿದ್ದು, ಡೆಂಗಿ ಪೀಡಿತರಲ್ಲಿ 206 ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ. ಇನ್ನುಳಿದವರು ಮನೆ ಆರೈಕೆಯ ಮೂಲಕ ಚೇತರಿಸಿಕೊಳ್ಳುತ್ತಿದ್ದಾರೆ.
ಡೆಂಗಿ ಪತ್ತೆಗೆ ಸಂಬಂಧಿಸಿದಂತೆ ಈವರೆಗೆ 1.65 ಲಕ್ಷ ಮಂದಿಗೆ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಒಟ್ಟು 23,526 ಡೆಂಗಿ ಪ್ರಕರಣಗಳು ದೃಢಪಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.