ADVERTISEMENT

ಚಿಕಿತ್ಸೆ ಸಿಗದ ಮತ್ತೊಬ್ಬ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 10:35 IST
Last Updated 4 ಜುಲೈ 2020, 10:35 IST

ಬೆಂಗಳೂರು: ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಶನಿವಾರ ಮೃತಪಟ್ಟಿದ್ದಾರೆ.

ಮಂಜುನಾಥ್ ಎಂಬುವರು ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಹಲವು ಆಸ್ಪತ್ರೆಗಳ ಕದ ತಟ್ಟಿದ್ದರು. ಆದರೆ, ಹಾಸಿಗೆ ಖಾಲಿ ಇಲ್ಲ ಎಂಬ ಕಾರಣಕ್ಕೆ ದಾಖಲಿಸಿಕೊಂಡಿರಲಿಲ್ಲ.

ಶನಿವಾರ ಮಂಜುನಾಥ್ ಅವರ ಆರೋಗ್ಯ ತೀರಾ ಹದಗೆಟ್ಟಾಗ ವೈದ್ಯರನ್ನು ಕಾಡಿ ಬೇಡಿ ವಿಕ್ರಮ್ ಆಸ್ಪತ್ರೆಗೆ ಅವರ ಪತ್ನಿ ದಾಖಲಿಸಿದ್ದರು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ 15 ನಿಮಿಷದಲ್ಲಿ ಅವರು ಮೃತಪಟ್ಟಿದ್ದಾರೆ.

ADVERTISEMENT

ಮೃತ ವ್ಯಕ್ತಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ಮೃತ ದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಬಂದಿರುವ ಮಂಜುನಾಥ್ ಅವರ ಪತ್ನಿ ಒಬ್ಬಂಟಿಯಾಗಿ ಆಸ್ಪತ್ರೆ ಬಳಿಯೇ ಕುಳಿತಿದ್ದಾರೆ. ‘ಸಂಬಂಧಿಕರು ದೂರವಾಣಿ ಮೂಲಕವೇ ಸಾಂತ್ವಾನ ಹೇಳುತ್ತಿದ್ದು, ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ’ ಎಂದು ಅವರು ಕಣ್ಣೀರಿಟ್ಟರು.

ಇನ್ನೊಂದೆಡೆ ಕೆಂಗೇರಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯನ್ನು ಒಂದು ದಿನ ಕಳೆದರೂ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೆ ಪರದಾಡಿದರು.

‘ಸೋಂಕು ಇರುವುದನ್ನು ಖಚಿತಪಡಿಸಿದ ಬಿಬಿಎಂಪಿ ಸಿಬ್ಬಂದಿ, ಕರೆದೊಯ್ಯಲು ಬಂದಿಲ್ಲ. ಕೆಮ್ಮು ಮತ್ತು ಉಸಿರಾಟದ ತೊಂದರೆ ಹೆಚ್ಚಾಗುತ್ತಿದೆ’ ಎಂದು ಅವರು ದೂರವಾಣಿ ಮೂಲಕ ಮಾಧ್ಯಮಗಳ ಬಳಿ ಅಳಲು ತೋಡಿಕೊಂಡರು.

ಕಲಾಸಿಪಾಳ್ಯದಲ್ಲಿ ಸೋಂಕಿತ ವ್ಯಕ್ತಿ ಮೃತಪಟ್ಟು ಒಂದು ದಿನ ಕಳೆದರೂ ಮೃತದೇಹವನ್ನು ಬಿಬಿಎಂಪಿ ಸಿಬ್ಬಂದಿ ಸ್ಥಳಾಂತರಿಸಿಲ್ಲ. ಮನೆಯ ಬಳಿ ಸ್ಯಾನಿಟೈಸ್ ಮಾಡಿದ್ದರೂ ಮೃತದೇಹ ಮನೆಯಲ್ಲೇ ಇರುವುದರಿಂದ ಅಕ್ಕ–ಪಕ್ಕದ ನಿವಾಸಿಗಳು ಆತಂಕ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.