ಬೆಂಗಳೂರು: ‘ದೇವದಾಸಿಯರ ಮರುಸಮೀಕ್ಷೆಗೆ 45 ವರ್ಷ ಆದವರನ್ನು ಮಾತ್ರ ಪರಿಗಣಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಯಾವುದೇ ರೀತಿಯ ವಯೋಮಿತಿ ನಿಗದಿಪಡಿಸದೇ, ಎಲ್ಲ ದೇವದಾಸಿಯರನ್ನು ಪರಿಗಣಿಸಬೇಕು’ ಎಂದು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹಿಸಿದರು.
ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಈ ಹಿಂದೆ ನಡೆದ ಸಮೀಕ್ಷೆಯಲ್ಲಿ 46,660 ದೇವದಾಸಿಯರನ್ನು ಗುರುತಿಸಲಾಗಿದೆ. ಹಲವಾರು ದೇವದಾಸಿಯರು ಕಾರಣಾಂತರಗಳಿಂದ ಹಿಂದೆ ನಡೆದ ಸಮೀಕ್ಷೆಯಿಂದ ಹೊರಗೆ ಉಳಿದಿದ್ದಾರೆ. ಇದರಿಂದ ಅವರಿಗೆ ಯಾವುದೇ ರೀತಿಯ ಸರ್ಕಾರಿ ಯೋಜನೆಗಳು ಸಿಗುತ್ತಿಲ್ಲ. ಈಗ ಮರುಸಮೀಕ್ಷೆ ನಡೆಸುತ್ತಿರುವ ಸಂದರ್ಭದಲ್ಲಿ ವಯೋಮಿತಿ ನಿಗದಿಪಡಿಸಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮರುಸಮೀಕ್ಷೆಯನ್ನು ಕಚೇರಿಯಲ್ಲಿ ಕುಳಿತುಕೊಂಡು ಮಾಡಬಾರದು. ರಾಜ್ಯದ 15 ಜಿಲ್ಲೆಗಳಲ್ಲಿರುವ ದೇವದಾಸಿಯರ ಪ್ರತಿಯೊಂದು ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಇದರಲ್ಲಿ ಸ್ಥಳೀಯ ಆಡಳಿತ, ಸಮುದಾಯ ಹಾಗೂ ಸಂಘಟನೆಗಳ ನೆರವು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ವೇದಿಕೆಯ ರಾಜ್ಯ ಘಟಕದ ಸಂಚಾಲಕ ಯಮನೂರಪ್ಪ ಮಾತನಾಡಿ, ‘ದೇವದಾಸಿಯರ ಮರು ಸಮೀಕ್ಷೆ ಪ್ರಕ್ರಿಯೆಯ ಭಾಗವಾಗಿ ವಿವಿಧ ಹಂತಗಳಲ್ಲಿ ರಚಿಸುವ ಸಮಿತಿಗಳಲ್ಲಿ ದೇವದಾಸಿಯರು ಹಾಗೂ ಅವರ ಮಕ್ಕಳನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು. ದೇವದಾಸಿಯರ ಪರವಾಗಿ ನಿರಂತರವಾಗಿ ಕೆಲಸ ಮಾಡುವ ಸಂಘ–ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ರಾಜ್ಯ ಸಮಿತಿಯನ್ನು ರಚಿಸಬೇಕು’ ಎಂದು ಆಗ್ರಹಿಸಿದರು.
‘ನಿರ್ದಿಷ್ಟ ಮಾನದಂಡಗಳು ಮತ್ತು ಕಾರ್ಯಸೂಚಿ ಒಳಗೊಂಡ ಮಾರ್ಗಸೂಚಿಯನ್ನು ಮರು ಸಮೀಕ್ಷೆಗೆ ಸಿದ್ಧಪಡಿಸಬೇಕು, ಸಮೀಕ್ಷೆ ಕೈಗೊಳ್ಳುವವರಿಗೆ ಸಮರ್ಪಕವಾದ ತರಬೇತಿ ನೀಡಬೇಕು. ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ದೇವದಾಸಿಯರ ಮಕ್ಕಳ ಮದುವೆಗೆ ಸರ್ಕಾರ ನಿಗದಿಪಡಿಸಿರುವ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಪ್ರೋತ್ಸಾಹ ಧನ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅನುದಾನದ ಕೊರತೆ ಇದೆ ಎಂಬ ಉತ್ತರ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ರೇಣುಕಾ, ಸದಸ್ಯ ಜಡೆಮ್ಮ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.