ರೈಲು
– ಪ್ರಜಾವಾಣಿ ಚಿತ್ರ
ಬೆಂಗಳೂರು: ರೈಲು ಸಾರಿಗೆಯನ್ನು ಹೆಚ್ಚಿಸಲು ಮತ್ತು ದೇಶೀಯ ಕಂಟೇನರ್ ಸಂಚಾರವನ್ನು ಅಭಿವೃದ್ಧಿಪಡಿಸಲು ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ದೇವನಗೊಂದಿ ಟರ್ಮಿನಲ್ ಅನ್ನು ವಿಶೇಷ ಕಂಟೇನರ್ ರೈಲು ಟರ್ಮಿನಲ್ ಆಗಿ ಅಧಿಕೃತವಾಗಿ ಪ್ರಾರಂಭಿಸಿದೆ.
ಕಂಟೇನರ್ ಲಾಜಿಸ್ಟಿಕ್ಸ್ ಅನ್ನು ಸರಳಗೊಳಿಸುವ ಮತ್ತು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ಸಾರಿಗೆ ಆಯ್ಕೆಗಳನ್ನು ಒದಗಿಸುವ ಗುರಿ ಹೊಂದಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದೇವನಗೊಂದಿ ವಿಶೇಷ ಕಂಟೇನರ್ ರೈಲು ಟರ್ಮಿನಲ್, ಆಮದು ಮತ್ತು ರಫ್ತು ಕಾರ್ಯಾಚರಣೆಗಳನ್ನು ಉತ್ತೇಜಿಸಲಿದೆ. ತ್ವರಿತ ಮತ್ತು ಮಿತವ್ಯಯಕಾರಿ ಸರಕು ಸಾಗಣೆಗೆ ಅನುವು ಮಾಡಿಕೊಡಲಿದೆ. ಟರ್ಮಿನಲ್‌ನಲ್ಲಿ ಕಂಟೇನರ್ ಶೇಖರಣಾ ಶುಲ್ಕವನ್ನು ಸ್ಪರ್ಧಾತ್ಮಕವಾಗಿ ಪ್ರತಿದಿನಕ್ಕೆ ಪ್ರತಿ ಟಿಯುಇಗೆ (ಇಪ್ಪತ್ತು ಅಡಿ ಸಮಾನ ಕಂಟೇನರ್ ಯೂನಿಟ್) ₹35 ನಿಗದಿಪಡಿಸಲಾಗಿದೆ. ವಾರ್ಫೇಜ್ (ರೈಲ್ವೆ ಆವರಣದಲ್ಲಿ ಸರಕುಗಳನ್ನು ತುಂಬಲು ಮತ್ತು ಇಳಿಸಲು ನಿಗದಿಪಡಿಸಿದ ಉಚಿತ ಸಮಯವನ್ನು ಮೀರಿದ ಸಂದರ್ಭದಲ್ಲಿ ವಿಧಿಸಲಾಗುವ ಶುಲ್ಕ) ಅಥವಾ ನೆಲ ಬಾಡಿಗೆಯಂತಹ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ. ಟರ್ಮಿನಲ್‌ನ ಪ್ರವೇಶ ಶುಲ್ಕ ಪ್ರತಿ ರೈಲಿಗೆ ₹80,000 ಆಗಿರುತ್ತದೆ.
ವಿವಿಧ ಬಂದರುಗಳಿಂದ ಬೆಂಗಳೂರಿಗೆ ಮತ್ತು ದೇಶದ ದೂರದ ಸ್ಥಳಗಳಿಗೆ ಸರಕುಗಳ ಸಾಗಣೆಯನ್ನು ಹೆಚ್ಚು ಕೈಗೆಟುಕುವ ಹಾಗೆ ಮಾಡುವ ಗುರಿಯನ್ನು ಈ ಟರ್ಮಿನಲ್ ಹೊಂದಿದೆ. ಆಮದುದಾರರು ಈಗ ವಿವಿಧ ಅಂತರರಾಷ್ಟ್ರೀಯ ಬಂದರುಗಳಿಂದ ಬೆಂಗಳೂರಿಗೆ ಸರಕುಗಳನ್ನು ಸಾಗಿಸಬಹುದು.
ದೇವನಗೊಂದಿ ಟರ್ಮಿನಲ್ ಹೊಸಕೋಟೆ, ಮಾಲೂರು ಮತ್ತು ವೈಟ್‌ಫೀಲ್ಡ್‌ನಂತಹ ಕೈಗಾರಿಕಾ ಪ್ರದೇಶಗಳಿಗೆ ಹತ್ತಿರ ಇರುವುದರಿಂದ ಈ ಪ್ರದೇಶಗಳಲ್ಲಿನ ಉತ್ಪನ್ನಗಳು ರೈಲು ಮೂಲಕ ಸಾಗಣೆ ಮಾಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.