ಬೆಂಗಳೂರು: ‘ಬ್ರ‍್ಯಾಂಡ್ ಬೆಂಗಳೂರು ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 50 ಉದ್ಯಾನಗಳ ಅಭಿವೃದ್ದಿ ಹಾಗೂ ಉನ್ನತೀಕರಣ ಮಾಡಲಾಗುತ್ತಿದೆ‘ ಎಂದು ಬಿಬಿಎಂಪಿ ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹಲೋತ್ ತಿಳಿಸಿದರು.
ನಗರದ ಬ್ಯೂಗಲ್ ರಾಕ್ ಉದ್ಯಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ಹಬ್ಬ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ 1,287 ಉದ್ಯಾನಗಳು ಬರಲಿವೆ. ಎಲ್ಲ ಉದ್ಯಾನಗಳಲ್ಲಿ ಹಸಿರೀಕರಣ, ಫೆನ್ಸಿಂಗ್ ಮಾಡಲಾಗಿದೆ. ನಾಗರಿಕರಿಗೆ ಆಸನಗಳ ವ್ಯವಸ್ಥೆ, ಇನ್ನಿತರೆ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಿರುವ ಎಲ್ಲಾ ಉದ್ಯಾನಗಳಲ್ಲಿ ಉನ್ನತೀಕರಣ ಕಾರ್ಯ ನಡೆದಿದೆ. ಉದ್ಯಾನಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿಸಲು ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
‘ಉದ್ಯಾನಗಳಿಗೆ ಬರುವ ಸಾರ್ವಜನಿಕರು, ವಾಯುವಿಹಾರಿಗಳಿಗೆ ಅನುಕೂಲವಾಗಲೆಂದು ಉದ್ಯಾನಗಳಲ್ಲಿ ‘ಬೆಂಗಳೂರು ಹಬ್ಬ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ನಮ್ಮ ಪಾರಂಪರಿಕ ಸಂಸ್ಕೃತಿ, ಕಲೆಗಳು ಮತ್ತು ಇನ್ನಿತರ ಕಲಾ ಚಟುವಟಿಕೆಗಳಾದ ಡೊಳ್ಳುಕುಣಿತ, ಜಾನಪದ ಗಾಯನ, ಸುಗಮ ಸಂಗೀತ ಮತ್ತು ಜಾನಪದ ಕಲಾತಂಡಗಳನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂದಿನ ವರ್ಷದ ಮಾರ್ಚ್‌ವರೆಗೆ ವಿವಿಧ ಉದ್ಯಾನಗಳಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.
ಬೆಂಗಳೂರು ಹಬ್ಬದ ಅಂಗವಾಗಿ ಕಲಾತಂಡಗಳನ್ನು ಒಳಗೊಂಡಂತೆ ರಾಮಕೃಷ್ಣ ಮಠ ವೃತ್ತದಿಂದ ಬ್ಯೂಗಲ್ ರಾಕ್ ಉದ್ಯಾನದವರೆಗೆ ಜಾಗೃತಿ ಜಾಥಾ ನಡೆಸಿ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಯಿತು.
ಮಾಜಿ ಮೇಯರ್ ಸತ್ಯನಾರಾಯಣ, ತೋಟಗಾರಿಕಾ ಉಪ ನಿರ್ದೇಶಕ ಚಂದ್ರಶೇಖರ್, ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.