ADVERTISEMENT

₹ 367 ಕೋಟಿ ವೆಚ್ಚದಲ್ಲಿ ಪ್ರವಾಸಿ ತಾಣ ಅಭಿವೃದ್ಧಿ

ಅಧಿಕಾರದಲ್ಲಿ 100 ದಿನ-–ಸಚಿವ ಸಿ.ಟಿ.ರವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:00 IST
Last Updated 8 ಡಿಸೆಂಬರ್ 2019, 20:00 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು:ರಾಜ್ಯದಲ್ಲಿ ಪ್ರವಾಸಿ ತಾಣಗಳಲ್ಲಿ ₹ 367 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ.ರವಿ ಹೇಳಿದರು.

ತಾವು ಅಧಿಕಾರ ವಹಿಸಿಕೊಂಡು 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ವಿಧಾನಸೌಧದಲ್ಲಿ‘ಹೆಜ್ಜೆ ಗುರುತು’ ಕಿರು ಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಾದಾಮಿ, ಬೇಲೂರು, ಹಂಪಿ ಹಾಗೂ ವಿಜಯಪುರಗಳಲ್ಲಿ ತಾರಾ ಹೋಟೆಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಚಾಮುಂಡಿ ಬೆಟ್ಟದಲ್ಲಿ 'ಪ್ರಸಾದ' ಯೋಜನೆಯಡಿ ₹ 75 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಲಂಡನ್‌ ಬಿಗ್‌ ಬಸ್‌ ಮಾದರಿಯ ಆರು ಡಬಲ್‌ ಡೆಕ್ಕರ್‌ ಬಸ್‌ಗಳು ಮುಂದಿನ ವರ್ಷದಿಂದ ರಾಜ್ಯದಲ್ಲಿ ಓಡಾಟ ನಡೆಸಲಿವೆ ಎಂದರು.

ADVERTISEMENT

ಮಕ್ಕಳಿಗೆ ಪ್ರವಾಸ: ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಪ್ರವಾಸ ಆಯೋಜಿಸಲಾಗುವುದು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದ ನಿರುದ್ಯೋಗಿಗಳಿಗೆ ಮುಂದಿನ ವರ್ಷದಿಂದ ಟ್ಯಾಕ್ಸಿ ಜತೆಗೆ ಜೆಟ್‌ಸ್ಕಿ, ಜಲಕ್ರೀಡೆಯ ಇತರ ಉಪಕರಣಗಳನ್ನು ನೀಡಲಾಗುವುದು. ಮೈಸೂರಿನಲ್ಲಿರುವ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರವನ್ನು ₹ 75 ಕೋಟಿ ವೆಚ್ಚದಲ್ಲಿ ‘ಮೈಸೂರ್ ಹಾಥ್‌’ ರೂಪದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಪ್ರವಾಸೋದ್ಯಮ ಆದ್ಯತೆಯ ಕ್ಷೇತ್ರವಲ್ಲ, ಹೀಗಾಗಿ ದೊಡ್ಡ ಮೊತ್ತದ ಅನುದಾನವೂ ಇಲ್ಲ. ಅದಕ್ಕಾಗಿ ಅನಿವಾರ್ಯವಾಗಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ ಎಂದರು.

ಭಾಷಾ ಅಧ್ಯಯನ ಕೇಂದ್ರ: ಮೈಸೂರಿನಲ್ಲೇ ಕನ್ನಡ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿದೆ. ಮೈಸೂರು ವಿಶ್ವವಿದ್ಯಾಲಯ ಇದಕ್ಕಾಗಿ 3 ಎಕರೆ ಜಾಗ ನೀಡಲು ಮುಂದಾಗಿದೆ. ಈ ಕೇಂದ್ರ ಸ್ಥಾಪನೆಗಾಗಿ 3 ಸಮಿತಿಗಳ ರಚನೆಗೆ ಚಾಲನೆ ನೀಡಲಾಗಿದೆ. ಕೇಂದ್ರದ ಸಂಸ್ಕೃತಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಸಚಿವ ರವಿ ತಿಳಿಸಿದರು.

ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿ ಬಾಕಿ ಉಳಿದಿದ್ದ 17 ಸಾಧಕರಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನ ಪ್ರಯುಕ್ತ ರಂಗಾಯಣಗಳಿಂದ ‘ಪಾಪು ಗಾಂಧಿ–ಬಾಪು ಗಾಂಧಿ’ ನಾಟಕವನ್ನು ₹ 1 ಕೋಟಿ ವೆಚ್ಚದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.