ADVERTISEMENT

ಧರ್ಮಸ್ಥಳ ಪ್ರಕರಣ: ಸುಜಾತಾ ಭಟ್‌ ಮನೆಗೆ ಪೊಲೀಸ್‌ ಭದ್ರತೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 23:30 IST
Last Updated 23 ಆಗಸ್ಟ್ 2025, 23:30 IST
<div class="paragraphs"><p>ಪೊಲೀಸ್ – ಪ್ರಾತಿನಿಧಿಕ ಚಿತ್ರ</p></div>

ಪೊಲೀಸ್ – ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‘ಪುತ್ರಿ ಅನನ್ಯಾ ಭಟ್‌ 2003ರಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದಾಗ ನಾಪತ್ತೆ ಆಗಿದ್ದಾಳೆ’ ಎಂದು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೂರು ನೀಡಿದ್ದ ಸುಜಾತಾ ಭಟ್ ಅವರ ಮನೆಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಮನೆ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದೆ.

ಪುತ್ರಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ಅವರು ಗೊಂದಲದ ಹೇಳಿಕೆ ನೀಡುತ್ತಿರುವ ಪರಿಣಾಮ ಅವರ ಮನೆಗೆ ಮಾಧ್ಯಮ ಪ್ರತಿನಿಧಿಗಳು, ಯೂಟ್ಯೂಬರ್‌ಗಳು ಭೇಟಿ ನೀಡುತ್ತಿದ್ದಾರೆ.

ADVERTISEMENT

‘ನನಗೆ ಆರೋಗ್ಯ ಸರಿಯಿಲ್ಲ. ಬೆದರಿಕೆ ಇದೆ. ನನಗೆ ರಕ್ಷಣೆ ಕೊಡಿ. ಸಾರ್ವಜನಿಕರು ಮನೆಯತ್ತ ಬಾರದಂತೆ ನಿರ್ಬಂಧ ಹೇರಿ. ಮಾಧ್ಯಮದವರೂ ಮನೆಯ ಹತ್ತಿರ ಬಾರದಂತೆ ನೋಡಿಕೊಳ್ಳಿ’ ಎಂದು ಸುಜಾತಾ ಅವರು ಮನವಿ ಮಾಡಿದ್ದರಿಂದ ಬನಶಂಕರಿ ಪೊಲೀಸರು ಭದ್ರತೆ ನೀಡಿದ್ದಾರೆ ಎಂಬುದು ಗೊತ್ತಾಗಿದೆ.

ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸುಜಾತಾ ಭಟ್ ಅವರು ಮೂರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಧರ್ಮಸ್ಥಳಕ್ಕೆ ತೆರಳಿದ್ದ ಅವರು, ಎರಡು ದಿನಗಳ ಹಿಂದಷ್ಟೇ ನಗರಕ್ಕೆ ಬಂದು ಬನಶಂಕರಿಯ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾರೆ. 

ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ಬಿಎನ್‌ಎಸ್ 131 ಸೆಕ್ಷನ್‌ನಡಿ ಸುಜಾತಾ ಅವರಿಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆ ಅನ್ವಯ ದೂರುದಾರರು ಅಥವಾ ಸಾಕ್ಷಿದಾರರು 60 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಅಥವಾ 18 ವರ್ಷದ ಒಳಗಿನವರಾಗಿದ್ದರೆ ತನಿಖಾಧಿಕಾರಿಗಳೇ ಅವರ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಿಕೊಳ್ಳಲು ಅವಕಾಶ ಇದೆ. ಅನಾರೋಗ್ಯದ ಕಾರಣ ನೀಡಿ ಸುಜಾತಾ ಅವರು ಈ ಹಿಂದೆ ವಿಚಾರಣೆಗೆ ಗೈರಾಗಿದ್ದರು. ಪ್ರಕರಣದ ತನಿಖೆ ಚುರುಕಾಗಿದ್ದು, ಸದ್ಯದಲ್ಲೇ ಹೇಳಿಕೆ ದಾಖಲು ಮಾಡಿಕೊಳ್ಳಲಾಗುವುದು. ಸುಜಾತಾ ಭಟ್ ಅವರು ಮಾಧ್ಯಮಗಳ ಎದುರು ವಿಭಿನ್ನ ಹೇಳಿಕೆ ನೀಡಿದ್ದಾರೆ. ದೂರಿನಲ್ಲೇ ಬೇರೆ ರೀತಿಯಲ್ಲಿ ಉಲ್ಲೇಖಿಸಿದ್ದರು. ಎಲ್ಲವನ್ನೂ ಪರಿಶೀಲಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

‘ಅನನ್ಯಾ ಭಟ್‌ ನನ್ನ ಮಗಳು ಅಲ್ಲ. ಈ ಬಗ್ಗೆ ಕಥೆ ಕಟ್ಟಿದ್ದೇನೆ’ ಎಂದು ಹೇಳಿದ್ದರು. ಅದಾದ ಮೇಲೆ, ‘ಅನನ್ಯಾ ನನ್ನ ಮಗಳು. ಕಾರಿನೊಳಗೆ ತುರುಕಿ ಸಂದರ್ಶನದ ವೇಳೆ ಬೆದರಿಸಿ ನನ್ನ ಕಡೆಯಿಂದ ಹೇಳಿಕೆ ಕೊಡಿಸಿದ್ದಾರೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.