ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ಅಧಿಕಾರಿಗಳನ್ನು ನಿಯೋಜನೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶಿಸಿದ್ದಾರೆ.
ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿ ಭಾನುವಾರ ಸರ್ಕಾರ ಆದೇಶ ಹೊರಡಿಸಿತ್ತು. ಈ ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅವರು ಸದಸ್ಯರಾಗಿದ್ದಾರೆ.
ತಂಡದಲ್ಲಿರುವ ಅಧಿಕಾರಿಗಳು, ಸಿಬ್ಬಂದಿ: ಮಂಗಳೂರು ಡಿಸಿಆರ್‌ಇ ಎಸ್‌ಪಿ ಸಿ.ಎ.ಸೈಮನ್, ಉಡುಪಿ ಸಿಎಎನ್ ಠಾಣೆಯ ಡಿವೈಎಸ್ಪಿ ಎ.ಸಿ.ಲೋಕೇಶ್, ದಕ್ಷಿಣ ಕನ್ನಡ ಸಿಇಎನ್ ಠಾಣೆಯ ಡಿವೈಎಸ್‌ಪಿ ಮಂಜುನಾಥ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್, ಸಿಎಸ್‌ಪಿ ಇನ್‌ಸ್ಪೆಕ್ಟರ್ ಇ.ಸಿ.ಸಂಪತ್, ಸಿಎಸ್‌ಪಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಕುಸುಮಧರ್, ಉತ್ತರ ಕನ್ನಡದ ಶಿರಸಿ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥಗೌಡ, ಉಡುಪಿ, ಬೈಂದೂರು ಇನ್‌ಸ್ಪೆಕ್ಟರ್ ಪಿ.ಡಿ.ಸವಿತ್ರ ತೇಜ್, ಸಿಎಸ್‌ಪಿ ಸಬ್ ಇನ್‌ಸ್ಪೆಕ್ಟರ್ ಕೋಕಿಲ ನಾಯಕ್, ಸಿಎಸ್‌ಪಿ ಸಬ್ ಇನ್‌ಸ್ಪೆಕ್ಟರ್ ಶಿವಶಂಕರ್, ಉತ್ತರ ಕನ್ನಡ, ಶಿರಸಿ ಎನ್‌ಎಂ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಜ್‌ಕುಮಾರ್ ಉಕ್ಕಳ್ಳಿ, ಉತ್ತರ ಕನ್ನಡ ಅಂಕೋಲ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆರ್.ಸುಹಾಸ್, ಉತ್ತರ ಕನ್ನಡ ಮುಂಡಗೋಡ ಸಬ್ ಇನ್‌ಸ್ಪೆಕ್ಟರ್ ವಿನೋದ್ ಎಸ್.ಕಾಳಪ್ಪನವರ್, ಮಂಗಳೂರು ಮೆಕ್ಸಾಂ ಠಾಣೆಯ ಪಿಎಸ್‌ಐ ಜೆ.ಗುಣಪಾಲ್, ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್‌ಐ ಶುಭಾಷ್ ಕಾಮತ್, ಉಡುಪಿ ಕೌಪ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಹರೀಶ್‌ಬಾಬು, ಉಡುಪಿ ಮಲ್ಪೆ ವೃತ್ತದ ಹೆಡ್ ಕಾನ್‌ಸ್ಟೆಬಲ್ ಪ್ರಕಾಶ್, ಉಡುಪಿ ಕುಂದಾಪುರ ನಗರ ಠಾಣೆಯ ನಾಗರಾಜ್ ಮತ್ತು ಚಿಕ್ಕಮಗಳೂರಿನ ಎಎಂಎಸ್ ಹೆಡ್ ಕಾನ್‌ಸ್ಟೆಬಲ್ ದೇವರಾಜ್ ಅವರನ್ನು ಎಸ್‌ಐಟಿಗೆ ನಿಯೋಜಿಸಿ ಆದೇಶಿಸಲಾಗಿದೆ.
ಎಸ್‌ಐಟಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಭಂದಿಯನ್ನು ನಿಯೋಜಿಸಲಾಗಿದೆ. ಈ ತಂಡವು ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ತನಿಖೆ ನಡೆಸಲಿದೆ. ಧರ್ಮಸ್ಥಳ ಅಥವಾ ಉಜಿರೆ ಸಮೀಪದಲ್ಲಿ ಎಸ್‌ಐಟಿ ಕಾರ್ಯ ಚಟುವಟಿಕೆಗೆ ಕಚೇರಿ ತೆರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.