
ಬೆಂಗಳೂರು: ಶಾಸ್ತ್ರೀಯ, ಪಾಶ್ಚಾತ್ಯ ಸೇರಿ ವಿವಿಧ ಪ್ರಕಾರಗಳಲ್ಲಿ ಮಕ್ಕಳು ನೃತ್ಯ ಪ್ರದರ್ಶಿಸಿ ಗಮನ ಸೆಳೆದರೆ, ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಸಹ ಸ್ಪರ್ಧಿಗಳು, ಪೋಷಕರು ಹಾಗೂ ಶಿಕ್ಷಕರು ಚಪ್ಪಾಳೆಯ ಪ್ರೋತ್ಸಾಹ ನೀಡಿದರು. ಈ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ್ದು ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್ (ಡಿಎಚ್‌ಐಇ) ವತಿಯಿಂದ ಹಮ್ಮಿಕೊಂಡಿದ್ದ ‘ಡಿಎಚ್‌ಐಇ ಎಕ್ಸ್‌ಪ್ರೆಷನ್ಸ್’ ಅಂತರ ಶಾಲಾ ಸ್ಪರ್ಧೆ.
ಬಾಲಭವನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಈ ಸ್ಪರ್ಧೆಯು ಶುಕ್ರವಾರ ಸಂಪನ್ನವಾಯಿತು. ಕೊನೆಯ ದಿನ ನಡೆದ ನೃತ್ಯ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳಿಂದ 40ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ವಿಭಿನ್ನ ವೇಷಭೂಷಣದ ಮೂಲಕ ಗಮನ ಸೆಳೆದ ಮಕ್ಕಳು, ವಿವಿಧ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ಪ್ರತಿಭೆ ಅನಾವರಣ ಮಾಡಿದರು. ಕಿರಿಯರ ವಿಭಾಗದಲ್ಲಿ 22 ತಂಡಗಳು ಭಾಗವಹಿಸಿದರೆ, ಹಿರಿಯರ ವಿಭಾಗದಲ್ಲಿ 23 ತಂಡಗಳು ಪಾಲ್ಗೊಂಡಿದ್ದವು.
‘ಕಾಂತಾರ’ ಸೇರಿ ವಿವಿಧ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ಎರಡು ವಿಭಾಗದಲ್ಲಿ ತಲಾ ಆರು ಬಹುಮಾನಗಳನ್ನು ನೀಡಿ, ಪ್ರೋತ್ಸಾಹಿಸಲಾಯಿತು. ಮಧುಲಿತಾ ಮೊಹಪಾತ್ರ, ಮನೋಜ್ ತ್ರಿಪಾಠಿ ಹಾಗೂ ನಾನ್ಸಿ ಅಬ್ರಹಾಂ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಬಾಲಭವನದ ಮೇಲ್ವಿಚಾರಕಿ ಪುಷ್ಪವತಿ ಆರ್., ‘ಮಕ್ಕಳಿಗಾಗಿಯೇ ಬಾಲಭವನವನ್ನು ರೂಪಿಸಲಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಪ್ರವೇಶ ಉಚಿತ ಇರಲಿದೆ. ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ಪಾರ್ಕ್ ಇದ್ದು, ಯುಡಿಐಡಿ ಕಾರ್ಡ್ ಹೊಂದಿದ್ದಲ್ಲಿ ಪ್ರವೇಶ ಶುಲ್ಕವಿಲ್ಲ’ ಎಂದರು.
ಬಾಲಭವನ ಸೊಸೈಟಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರನ್ನು ಸನ್ಮಾನಿಸಲಾಯಿತು. ಬಾಲಭವನ ಸೊಸೈಟಿಯ ಆಡಳಿತಾಧಿಕಾರಿ ಧನಲಕ್ಷ್ಮಿ ಎಲ್., ಟಿಪಿಎಂಎಲ್ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎ. ರವಿ, ಡಿಎಚ್‌ಐಇ ಸಂಪಾದಕಿ ಕ್ಯಾರೊಲಿನ್ ಡಯಾನಾ ಉಪಸ್ಥಿತರಿದ್ದರು.
ನೃತ್ಯ ಸ್ಪರ್ಧೆಯ ಕಿರಿಯರ ವಿಭಾಗದ ವಿಜೇತರು
ಮೊದಲ ಸ್ಥಾನ; ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡರಿ ಎಜುಕೇಷನ್ ಎರಡನೆ ಸ್ಥಾನ; ಶ್ರೀ ವಿದ್ಯಾಮಂದಿರ ಎಜುಕೇಷನ್ ಸೊಸೈಟಿ ಮೂರನೆ ಸ್ಥಾನ; ಈಸ್ಟ್ ವೆಸ್ಟ್ ಪಬ್ಲಿಕ್ ಸ್ಕೂಲ್ ನಾಲ್ಕನೆ ಸ್ಥಾನ; ದಿ ಸೌಥ್ ಸ್ಕೂಲ್ ಐದನೆ ಸ್ಥಾನ; ಜುಬಿಲಿ ಇಂಗ್ಲಿಷ್ ಹೈಸ್ಕೂಲ್ ಆರನೆ ಸ್ಥಾನ; ಗಂಗಾ ಇಂಟರ್‌ನ್ಯಾಷನಲ್ ಸ್ಕೂಲ್ ಹಿರಿಯರ ವಿಭಾಗದ ವಿಜೇತರು ಮೊದಲ ಸ್ಥಾನ; ಶ್ರೀ ಅಯ್ಯಪ್ಪ ಎಜುಕೇಷನ್ ಸೆಂಟರ್ ಸಿಬಿಎಸ್‌ಇ ಎರಡನೆ ಸ್ಥಾನ; ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡರಿ ಎಜುಕೇಷನ್ ಮೂರನೆ ಸ್ಥಾನ; ಜುಬಿಲಿ ಇಂಗ್ಲಿಷ್ ಸ್ಕೂಲ್ ಹೈಸ್ಕೂಲ್ ಎನ್‌ಆರ್‌ಐ ಲೇಔಟ್ ನಾಲ್ಕನೆ ಸ್ಥಾನ; ಗಂಗಾ ಇಂಟರ್‌ನ್ಯಾಷನಲ್ ಸ್ಕೂಲ್ ಐದನೆ ಸ್ಥಾನ; ಎಂಟಿಬಿ ಜ್ಞಾನಜ್ಯೋತಿ ವಿದ್ಯಾನಿಕೇತನ್ ಆರನೆ ಸ್ಥಾನ; ದಿ ಸೌಥ್ ಸ್ಕೂಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.