ADVERTISEMENT

ಸಾಲ ಮರುಪಾವತಿಗೆ ಡಿಜಿಟಲ್ ವೇದಿಕೆ

ಆರ್ಯ ವೈಶ್ಯ ಅಭಿವೃದ್ಧಿ ನಿಗಮದಿಂದ ಸದ್ಯವೇ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 19:19 IST
Last Updated 6 ಅಕ್ಟೋಬರ್ 2020, 19:19 IST
ಡಿ.ಎಸ್.ಅರುಣ್
ಡಿ.ಎಸ್.ಅರುಣ್   

ಬೆಂಗಳೂರು: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಉದ್ದೇಶಗಳಿಗಾಗಿ ಸಾಲ ಪಡೆದ ಫಲಾನುಭವಿಗಳು ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ನಿಗಮವು ಡಿಜಿಟಲ್‌ ವೇದಿಕೆ ಅಭಿವೃದ್ಧಿಪಡಿಸಲಿದೆ.

‘ನಿಗಮದಿಂದ ಸಾಲ ಪಡೆದವರು ಮರುಪಾವತಿ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿರುವುದು ಮಾತ್ರವಲ್ಲದೆ, ಕಳೆದ ಜೂನ್‌–ಜುಲೈ ಅವಧಿಯಲ್ಲಿ ₹20 ಲಕ್ಷಕ್ಕೂ ಹೆಚ್ಚು ಮೊತ್ತ ಸಾಲದ ಮರುಪಾವತಿ ಆಗಿದೆ’ ಎಂದು ನಿಗಮದ ಅಧ್ಯಕ್ಷ ಡಿ.ಎಸ್‌.ಅರುಣ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಾಲ ಮರುಪಾವತಿಯನ್ನು ಉತ್ತೇಜಿಸುವ ಸಲುವಾಗಿ ರೆಸ್ಸರ್ಸ್ ಪೇ ಕಂಪನಿ ಮೂಲಕ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದು, ಆ್ಯಪ್‌ ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ ಜೂನ್‌ನಿಂದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡಿ, ಫಲಾನುಭವಿಗಳಲ್ಲಿ ಸಾಲ ಮರುಪಾವತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಸಾಲ ಮರುಪಾವತಿಗೆ ಮುಂದಾಗಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ಕಳೆದ ಸಾಲಿನಲ್ಲಿ ನಿಗಮಕ್ಕೆ ₹11 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ ಸ್ವಯಂ ನೇರ ಸಾಲ ಯೋಜನೆ ಮತ್ತು ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ 1,000 ಕ್ಕೂ ಹೆಚ್ಚು ಫಲಾನುಭವಿಗಳಿಗೆ ₹10.50 ಕೋಟಿ ಸಾಲ ವಿತರಿಸಲಾಗಿದೆ. ಅಲ್ಲದೆ, 50 ವರ್ಷ ವಯಸ್ಸು ಮೀರಿದವರಿಗೂ ವ್ಯಾಪಾರ ಮತ್ತು ವ್ಯವಹಾರ ನಡೆಸಲು ಸಾಲ ನೀಡುವ ಚಿಂತನೆ ಇದೆ. ಈ ಕುರಿತು ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು’ ಎಂದು ಅರುಣ್ ವಿವರಿಸಿದರು.

ಇತರ ವೈಶ್ಯರಿಗೆ ನಿಗಮದ ಸೌಲಭ್ಯ ಇಲ್ಲ:ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಕೇವಲ ಆರ್ಯ ವೈಶ್ಯರ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿತವಾಗಿರುವ ನಿಗಮ. ಆದ್ದರಿಂದ ಉತ್ತರಕನ್ನಡ, ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳಲ್ಲಿರುವ ‘ಸರ್ವ ಕನ್ನಡ ವೈಶ್ಯ’, ‘ವಾಣಿ’, ‘ವೈಶ್ಯ ವಾಣಿ’ ಮುಂತಾದ ವೈಶ್ಯ ಸಮುದಾಯಗಳಿಗೆ ಈ ಸೌಲಭ್ಯಗಳನ್ನು ವಿಸ್ತರಿಸುವುದಿಲ್ಲ ಎಂದು ಅರುಣ್‌ ತಿಳಿಸಿದರು.

ಆದರೆ, ಆರ್ಯ ವೈಶ್ಯರಲ್ಲೇ ಇರುವ ಇನ್ನೂ ಐದಾರು ಉಪ ಪಂಗಡಗಳನ್ನು ನಿಗಮದ ವ್ಯಾಪ್ತಿಗೆ ತಂದು ಸೌಲಭ್ಯಗಳನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.