ಬೆಂಗಳೂರು:‘ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ತ್ವರಿತ ವಿಲೇವಾರಿಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಅದಕ್ಕಾಗಿ ಡಿಜಿಟಲ್ ಸ್ಪರ್ಶ ನೀಡಲಾಗುವುದು’ ಎಂದು ನಿವೃತ್ತ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಹೇಳಿದರು.
ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ರಾಜ್ಯ ಆಯೋಗದಲ್ಲಿ ಏಳು ಸಾವಿರ, ಜಿಲ್ಲಾ ವೇದಿಕೆಗಳಲ್ಲಿ ಏಳು ಸಾವಿರ ಪ್ರಕರಣಗಳು ಬಾಕಿ ಉಳಿದಿವೆ. ಇವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು. ಕಕ್ಷಿದಾರರಿಗೆ ಶೀಘ್ರ ಮತ್ತು ಪಾರದರ್ಶಕವಾಗಿ ನ್ಯಾಯ ವಿತರಣೆ ಮಾಡಲಾಗುವುದು. ರಾಜ್ಯ ಆಯೋಗ ಮತ್ತು ಜಿಲ್ಲಾ ವೇದಿಕೆಗಳ ಆದೇಶಗಳನ್ನು ಆ್ಯಪ್‌ಗಳ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಯೋಜನೆಗಳನ್ನು ಹಂಚಿಕೊಂಡರು.
ಆಯೋಗದ ಆದೇಶಗಳು ಮತ್ತು ಮಾಹಿತಿ ಬೆರಳ ತುದಿಯಲ್ಲಿ ಸಿಗುವಂತೆ ಮಾಡಲಾಗುವುದು. ಖಾಲಿಯಿರುವ ಹುದ್ದೆಗಳ ಭರ್ತಿಗೂ ಕ್ರಮವಹಿಸಲಾಗುವುದು ಎಂದರು.
ಆಯೋಗದ ಪ್ರಭಾರ ಅಧ್ಯಕ್ಷ ರವಿಶಂಕರ್ ಅಧಿಕಾರ ಹಸ್ತಾಂತರಿಸಿದರು. ಆಯೋಗದ ರಿಜಿಸ್ಟ್ರಾರ್ ಮಲ್ಲಿಕಾರ್ಜುನ ಎಂ. ಕಮಟಗಿ, ಆಯೋಗದ ಸದಸ್ಯೆ ಸುನೀತಾ ಬಾಗೇವಾಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.