ಬೆಂಗಳೂರು: ಸಿನಿಮಾ ನಿರ್ದೇಶಕನನ್ನು ಅಪಹರಿಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸೇರಿ 11 ಮಂದಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭೀಮಾ ಸಿನಿಮಾ ನಟಿ ಐಶ್ವರ್ಯ (30), ಇವೆಂಟ್ ಮ್ಯಾನೇಜ್‌ಮೆಂಟ್ ಕೆಲಸ ಮಾಡುತ್ತಿದ್ದ ಆಶೀರ್ವಾದ್ (26), ಸಿನಿಮಾ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀನಾರಾಯಣ (36), ಕೋಳಿ ಫಾರ್ಮ್ ನಡೆಸುತ್ತಿದ್ದ ಸುಜನ್(21), ಬ್ಲಿಂಕಿಟ್ ವ್ಯವಸ್ಥಾಪಕ ಚರಣ್ (26), ಎಲೆಕ್ಟ್ರಿಷಿಯನ್‌ಗಳಾದ ಅರ್ಸಲಾನ್ (20), ಮೊಹಮ್ಮದ್ ಆರೀಫ್ (31), ಗಾರೆ ಕೆಲಸದ ಉಸ್ತುವಾರಿ ಧ್ರುವಾ (26), ಕಾಲೇಜು ವಿದ್ಯಾರ್ಥಿಗಳಾದ ಸಂಜಯ್(24), ಶಾಹಿದ್ ಅಹ್ಮದ್ (21), ರಿಯಾನ್ (20) ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಆರು ಫೋನ್‌ಗಳು, ಚಿನ್ನಾಭರಣಗಳು, ಕಾರು ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆಡುಗೋಡಿ ನಂಜಪ್ಪ ಲೇಔಟ್‌ನಲ್ಲಿ ಅನೀಶ್ ವಾಸವಾಗಿದ್ದರು. ಕೆಲ ತಿಂಗಳ ಹಿಂದೆ ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತಗೊಂಡಿದ್ದರು. ಇತ್ತೀಚೆಗೆ ‘ಜೀವದ ಭಾಷೆ’ ಎಂಬ ಕನ್ನಡ ಸಿನಿಮಾ ನಿರ್ದೇಶಿಸಿದ್ದು, ಕಾರಣಾಂತರಗಳಿಂದ ಸಿನಿಮಾ ಬಿಡುಗಡೆಯಾಗಿಲ್ಲ. ಈ ಸಿನಿಮಾಕ್ಕೆ ಲಕ್ಷ್ಮೀನಾರಾಯಣ ಅವರು ₹6 ಲಕ್ಷ ಹೂಡಿಕೆ ಮಾಡಿದ್ದರು. ಸಿನಿಮಾ ವಿಚಾರವಾಗಿ ಇಬ್ಬರಲ್ಲಿ ವೈಮನಸ್ಸು ಉಂಟಾಗಿತ್ತು.
ಈ ವೇಳೆ ಆಶೀರ್ವಾದ್ ಅಲಿಯಾಸ್ ಆಶಿ ಎಂಬಾತನ ಪರಿಚಯವಾಗಿತ್ತು. ಕೆಲ ದಿನಗಳ ನಂತರ ಆಶೀರ್ವಾದ್ ನಿರ್ದೇಶಕನಿಂದ ₹ 2.5 ಲಕ್ಷ ಸಾಲ ಪಡೆದಿದ್ದ. ಕೆಲ ತಿಂಗಳ ಬಳಿಕ ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಹಾಕಿದ್ದ. ಅದರಿಂದ ಅನೀಶ್ ಆನ್‌ಲೈನ್ ಮೂಲಕ ದೂರು ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಈ ನಡುವೆ ನಟಿ ಐಶ್ವರ್ಯ ಬಳಿ ತನ್ನ ಕಾರು ಮಾರಾಟದ ಬಗ್ಗೆ ಅನೀಶ್ ಹೇಳಿಕೊಂಡಿದ್ದರು. ಈ ವಿಚಾರ ತಿಳಿದ ಆರೋಪಿಗಳು, ಕಾರು ಮಾರಾಟ ಮಾಡಿಸುವುದಾಗಿ ಐಶ್ವರ್ಯ ಮೂಲಕ ಹೇಳಿ, ಮುಂಬೈನಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಇಂದಿರಾನಗರದ ಗ್ಯಾರೇಜ್ ಬಳಿ ಅನೀಶ್ ಬಂದಾಗ, ಐಶ್ವರ್ಯ ಮತ್ತು ಶಾಹಿದ್, ಇತರೆ ಆರೋಪಿಗಳನ್ನು ಪರಿಚಯಿಸಿ ಹೋಗಿದ್ದಾರೆ.
ನಂತರ ಇತರೆ ಆರೋಪಿಗಳು ಅನೀಶ್‌ನನ್ನು ಅಪಹರಿಸಿ ಬ್ಯಾಡರಹಳ್ಳಿಯ ಮನೆಯೊಂದರಲ್ಲಿ ಬಂಧನದಲ್ಲಿಟ್ಟು, ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿ, ಅವರು ಧರಿಸಿದ್ದ 20 ಗ್ರಾಂ ಚಿನ್ನದ ಒಡವೆ ಮತ್ತು ₹30 ಸಾವಿರ ನಗದು ದೋಚಿದ್ದರು. ನಂತರ ಅವರನ್ನು ಕಾರಿನಲ್ಲಿ ತುಮಕೂರಿನ ಮಂದಾರಗಿರಿ ಬೆಟ್ಟದ ಬಳಿ ಕರೆದುಕೊಂಡು ಹೋಗಿ ಅಲ್ಲಿಯೂ ಹಲ್ಲೆ ಮಾಡಿ, ಕಳುಹಿಸಿದ್ದರು. ಬಳಿಕ ಅನೀಶ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತನಿಖೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.