ADVERTISEMENT

ಎಮ್ಮೆ ಖರೀದಿಗೆ ಮುಂದಾಗಿದ್ದ ಚಿತ್ರನಿರ್ದೇಶಕ ಪ್ರೇಮ್‌ಗೆ ಲಕ್ಷಾಂತರ ರೂಪಾಯಿ ವಂಚನೆ

₹4.50 ಲಕ್ಷ ಪಡೆದು ಮೋಸ, ಚಂದ್ರಾಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 14:40 IST
Last Updated 20 ಆಗಸ್ಟ್ 2025, 14:40 IST
ಪ್ರೇಮ್‌
ಪ್ರೇಮ್‌   

ಬೆಂಗಳೂರು: ಚಿತ್ರ ನಿರ್ದೇಶಕ ಪ್ರೇಮ್ ಅವರಿಂದ ₹4.50 ಲಕ್ಷ ಪಡೆದು ವಂಚಿಸಲಾಗಿದ್ದು, ಚಂದ್ರಾಲೇಔಟ್ ಪೊಲೀಸ್‌ ಠಾಣೆಯಲ್ಲಿ ಗುಜರಾತ್‌ನ ವ್ಯಕ್ತಿಯ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಪ್ರೇಮ್ ಅವರ ವ್ಯವಸ್ಥಾಪಕ ದಶಾವರ ಚಂದ್ರು ಅವರು ನೀಡಿದ ದೂರು ಆಧರಿಸಿ ಗುಜರಾತ್‌ನ ವಘೇಲಾ ವನರಾಜ್ ಭಾಯ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.

ಪ್ರೇಮ್ ಅವರು ಹೈನುಗಾರಿಕೆ ನಡೆಸಲು ಗುಜರಾತ್‌ ರಾಜ್ಯದಲ್ಲಿ ಎಮ್ಮೆಗಳನ್ನು ಖರೀದಿಸಲು ನಿರ್ಧರಿಸಿದ್ದರು. ಈ ನಡುವೆ ವಘೇಲಾ ವನರಾಜ್ ಭಾಯ್‍ ಎಂಬಾತನ ಪರಿಚಯವಾಗಿತ್ತು. ಎಮ್ಮೆಗಳ ಖರೀದಿ ಸಂಬಂಧ ವನರಾಜ್ ಜತೆ ಮಾತುಕತೆ ನಡೆಸಿದ್ದ ಪ್ರೇಮ್‌ ಅವರು, ಆತನಿಗೆ ಮುಂಗಡವಾಗಿ ಜುಲೈನಲ್ಲಿ ₹25 ಸಾವಿರ ಪಾವತಿಸಿದ್ದರು. ಬಳಿಕ ಆತನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹ 4.50 ಲಕ್ಷ ವರ್ಗಾಯಿಸಿದ್ದರು ಎಂದು ದಶಾವರ ಚಂದ್ರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಹಣ ಪಾವತಿಯ ಬಳಿಕ  ವಾಟ್ಸ್‌ಆ್ಯಪ್‌ನಲ್ಲಿ ಎರಡು ಎಮ್ಮೆಗಳ ವಿಡಿಯೊವನ್ನು ಪ್ರೇಮ್‌ ಅವರಿಗೆ  ಆರೋಪಿ ಕಳುಹಿಸಿದ್ದ. ಆ ಎಮ್ಮೆಗಳನ್ನು ಕಳುಹಿಸುತ್ತಿರುವುದಾಗಿಯೂ ಆರೋಪಿ ತಿಳಿಸಿದ್ದ. ಆದರೆ, ವಾರ ಕಳೆದರೂ ಎಮ್ಮೆಗಳು ಬಂದಿರಲಿಲ್ಲ. ಅನುಮಾನಗೊಂಡು ದಶಾವರ ಚಂದ್ರು ಅವರು ಆರೋಪಿಗೆ ಕರೆ ಮಾಡಿದ್ದರು. ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮಾತುಕತೆ ವೇಳೆ ವನರಾಜ್ ಭಾಯ್ ನೀಡಿದ್ದ ಗುಜರಾತ್‍ನ ವಿಳಾಸಕ್ಕೆ ಪರಿಚಿತರನ್ನು ಕಳುಹಿಸಿ ವಿಚಾರಿಸಿದಾಗ ಆತ ಆ ವಿಳಾಸದಲ್ಲೇ ಇಲ್ಲ ಎಂಬುದು ಗೊತ್ತಾಗಿದೆ. ಹಣವನ್ನು ಹಿಂದಿರುಗಿಸದೆ ಮೋಸ ಮಾಡಿರುವ ವನರಾಜ್ ಭಾಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ದಶಾವರ ಚಂದ್ರು ಮೂಲಕ ಪ್ರೇಮ್ ದೂರು ನೀಡಿದ್ದಾರೆ.

ಹಣ ವರ್ಗಾವಣೆ ಆಗಿರುವ ಆರೋಪಿ ವನರಾಜ್‍ನ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.