ADVERTISEMENT

ಎಟಿಎಂ ಸರ್ವರ್‌ ನಿಷ್ಕ್ರಿಯಗೊಳಿಸಿ ಹಣ ಡ್ರಾ; ಬಂಧನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 21:23 IST
Last Updated 2 ಮಾರ್ಚ್ 2021, 21:23 IST
ದೀಪಕ್
ದೀಪಕ್   

ಬೆಂಗಳೂರು: ಎಟಿಎಂ ಯಂತ್ರದ ಸರ್ವರ್‌ ನಿಷ್ಕ್ರಿಯಗೊಳಿಸಿ ಅಕ್ರಮವಾಗಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಆರೋಪದಡಿ ದೀಪಕ್ (20) ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದ ದೀಪಕ್, ಕೃತ್ಯ ಎಸಗಲೆಂದೇ ನಗರಕ್ಕೆ ಬಂದಿದ್ದ. ಆತನಿಂದ 48 ಎಟಿಎಂ ಕಾರ್ಡ್‌ಗಳು ಹಾಗೂ ₹52 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಮಿಷನ್ ನೀಡುವುದಾಗಿ ಹೇಳಿ ತಮ್ಮೂರಿನ ಜನರಿಂದ ಕಾರ್ಡ್‌ಗಳನ್ನು ತೆಗೆದುಕೊಂಡು ಬಂದಿದ್ದ ಆರೋಪಿ, ಅವುಗಳನ್ನೇ ಬಳಸಿಕೊಂಡು ಕೃತ್ಯ ಎಸಗುತ್ತಿದ್ದ.’

ADVERTISEMENT

'ಎಟಿಎಂ ಘಟಕಕ್ಕೆ ಹೋಗುತ್ತಿದ್ದ ಆರೋಪಿ, ಕಾರ್ಡ್‌ ಹಾಕಿ ಹಣ ಡ್ರಾ ಮಾಡಿಕೊಳ್ಳಲು ಮುಂದಾಗುತ್ತಿದ್ದ. ಯಂತ್ರದಿಂದ ಹಣ ಬರುವಾಗಲೇ ಯಂತ್ರದೊಳಗೆ ಕೈ ಬೆರಳಿಟ್ಟು ಸರ್ವರ್‌ ನಿಷ್ಕ್ರಿಯಗೊಳಿಸುತ್ತಿದ್ದ. ನಂತರ, ಹಣವನ್ನೂ ತೆಗೆದುಕೊಳ್ಳುತ್ತಿದ್ದ. ಆದರೆ, ಹಣ ಡ್ರಾ ಆದ ಬಗ್ಗೆ ಬ್ಯಾಂಕ್‌ಗೆ ಮಾಹಿತಿ ಹೋಗುತ್ತಿರಲಿಲ್ಲ’ ಎಂದೂ ಹೇಳಿದರು.

‘ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡುತ್ತಿದ್ದ ಆರೋಪಿ, ತನ್ನ ಹಣ ಬಂದಿಲ್ಲವೆಂದು ದೂರು ನೀಡುತ್ತಿದ್ದ. ನಿಜವೆಂದು ನಂಬಿ ಬ್ಯಾಂಕ್‌ನವರು ಹಣ ವಾಪಸು ಖಾತೆಗೆ ಜಮೆ ಮಾಡುತ್ತಿದ್ದರು’ ಎಂದೂ ತಿಳಿಸಿದರು.

‘ಎಟಿಎಂ ತಾಂತ್ರಿಕ ನಿರ್ವಹಣೆ ಕೆಲಸ ಮಾಡುತ್ತಿದ್ದ ಉಮಾ ಮಹೇಶ್, ಆರೋಪಿ ಕೃತ್ಯ ಪತ್ತೆ ಹಚ್ಚಿ ದೂರು ನೀಡಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.