ಬೆಂಗಳೂರು: ‘ಭಾಷೆ, ಗಡಿ, ಪ್ರದೇಶಗಳ ಹೆಸರಿನಲ್ಲಿ ಅನೇಕ ಶಕ್ತಿಗಳು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಸವಾಲನ್ನು ಒಡ್ಡುತ್ತಿವೆ. ಉತ್ತರ ಭಾರತ, ದಕ್ಷಿಣ ಭಾರತ ಎಂದು ವಿಭಜಿಸಲು ಹೊರಟಿವೆ. ಸಾಮಾಜಿಕ ಸಂಘಟನೆಗಳ ನಾಯಕರು, ಸಮುದಾಯಗಳ ನಾಯಕರು ವಿಭಜಕ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡಬೇಕು’ ಎಂದು ಆರ್‌ಎಸ್‌ಎಸ್ ಸಹ ಕಾರ್ಯವಾಹಕ ಮುಕುಂದ ಸಿ.ಆರ್. ತಿಳಿಸಿದರು.
ಆರ್‌ಎಸ್‌ಎಸ್ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ದ ಸಮಾವೇಶ ಉದ್ಘಾಟನೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ರೂಪಾಯಿ ಗುರುತನ್ನು ಬದಲಾಯಿಸುವುದು, ಭಾಷಾ ವಿಷಯಗಳನ್ನು ಉದ್ರೇಕಿಸುವುದು ಸರಿಯಲ್ಲ. ಎಲ್ಲ ಸಮಸ್ಯೆಗಳು ಸೌಹಾರ್ದಯುತವಾಗಿ ಪರಿಹಾರ ಕಾಣಬೇಕು ಎಂಬುದು ಆರ್‌ಎಸ್‌ಎಸ್ ಆಶಯ. ನಮ್ಮೊಳಗೆ ಕಿತ್ತಾಡುವಂತಾಗಬಾರದು’ ಎಂದು ಹೇಳಿದರು.
ಕ್ಷೇತ್ರ ಪುನರ್ವಿಂಗಡಣೆಗೆಯನ್ನು ದಕ್ಷಿಣ ರಾಜ್ಯಗಳಲ್ಲಿ ಪ್ರಸ್ತುತ ಇರುವ ಲೋಕಸಭಾ ಸ್ಥಾನಗಳ ಅನುಪಾತವನ್ನು ಆಧರಿಸಿ ಮಾಡಲಾಗುವುದು ಎಂದು ಗೃಹ ಸಚಿವರೇ ಹೇಳಿದ್ದಾರೆ. ಆರ್‌ಎಸ್‌ಎಸ್ ಈ ಬಗ್ಗೆ ಹೆಚ್ಚಿನದನ್ನು ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದ್ವಿಭಾಷೆ ಅಥವಾ ತ್ರಿಭಾಷಾ ಸೂತ್ರದ ಬಗ್ಗೆ ಆರ್‌ಎಸ್‌ಎಸ್ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪ್ರತಿ ಭಾರತೀಯನೂ ಬಹುಭಾಷೆ ಕಲಿಯಬೇಕು. ಶಿಕ್ಷಣದಲ್ಲಿ ಮಾತ್ರವಲ್ಲ, ನಿತ್ಯದ ವ್ಯವಹಾರದಲ್ಲಿ ಮಾತೃಭಾಷೆ ಇರಬೇಕು. ಪ್ರಾದೇಶಿಕ ಭಾಷೆ ತಿಳಿದಿರಬೇಕು. ವೃತ್ತಿಗಾಗಿ ಇಂಗ್ಲಿಷ್ ಅಥವಾ ಇನ್ಯಾವುದೇ ಭಾಷೆ ಗೊತ್ತಿದ್ದರೆ ಒಳ್ಳೆಯದು. ಹಿಂದಿ ಪ್ರದೇಶಗಳಲ್ಲಿ ದಕ್ಷಿಣ ಭಾರತದ ಮತ್ತು ಈಶಾನ್ಯ ಭಾರತದ ಯಾವುದಾದರೂ ಭಾಷೆ ಕಲಿಯಲು ಸಂಘ ಉತ್ತೇಜನ ನೀಡುತ್ತದೆ ಎಂದು ಪ್ರತಿಪಾದಿಸಿದರು.
ಮಣಿಪುರದಲ್ಲಿ ಶಾಂತಿ ಸ್ಥಾಪನೆಗಾಗಿ ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಅಲ್ಲಿನ ನಾಯಕತ್ವ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಒಗ್ಗಟ್ಟು ತರಲು, ಕಲಹ ನಿರತ ಸಮುದಾಯಗಳ ನಡುವೆ ಸೌಹಾರ್ದ ಮೂಡಿಸಲು ಸಂಘ ಕೆಲಸ ಮಾಡುತ್ತಿದೆ. ರಾಷ್ಟ್ರಪತಿ ಆಳ್ವಿಕೆ ಹೇರಿದ ಬಳಿಕ ಶಾಂತಿ ಸ್ಥಾಪನೆಯ ನಿರೀಕ್ಷೆ ಹೆಚ್ಚಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.