ADVERTISEMENT

ಬೆಂಗಳೂರು | ಪಟಾಕಿ ಅವಘಡ: ಹಲವರಿಗೆ ಗಾಯ

ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದವರಿಗೂ ತಾಗಿದ ಕಿಡಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 15:35 IST
Last Updated 21 ಅಕ್ಟೋಬರ್ 2025, 15:35 IST
ಹೆಬ್ಬಾಳದ ಬೀದಿಯಲ್ಲಿ ಮಕ್ಕಳು ಹಚ್ಚಿದ್ದ ಪಟಾಕಿ ಸಿಡಿದು ವೈದ್ಯರೊಬ್ಬರ ಕಣ್ಣಿಗೆ ಗಾಯ ಉಂಟಾಗಿದ್ದು ಅವರಿಗೆ ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಹೆಬ್ಬಾಳದ ಬೀದಿಯಲ್ಲಿ ಮಕ್ಕಳು ಹಚ್ಚಿದ್ದ ಪಟಾಕಿ ಸಿಡಿದು ವೈದ್ಯರೊಬ್ಬರ ಕಣ್ಣಿಗೆ ಗಾಯ ಉಂಟಾಗಿದ್ದು ಅವರಿಗೆ ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ನಗರದಲ್ಲಿ ಪಟಾಕಿ ಸಿಡಿತದಿಂದ ಅವಘಡಗಳು ಸಂಭವಿಸಿದ್ದು, ಎರಡು ದಿನದಲ್ಲಿ 42 ಮಕ್ಕಳು ಸೇರಿ 77 ಮಂದಿ ಗಾಯಗೊಂಡಿದ್ದಾರೆ.

ನಗರದ ಮಿಂಟೋ ಆಸ್ಪತ್ರೆಯಲ್ಲಿ ಆರು ಮಕ್ಕಳು ಮತ್ತು ಏಳು ಮಂದಿ ವಯಸ್ಕರು, ಡಾ. ಅಗರವಾಲ್ಸ್‌ ಕಣ್ಣಿನ ಆಸ್ಪತ್ರೆಯಲ್ಲಿ ಮೂವರು ಮಕ್ಕಳು, ಶಂಕರ್‌ ಕಣ್ಣಿನ ಆಸ್ಪತ್ರೆಯಲ್ಲಿ ಐವರು ಮಕ್ಕಳು ಸೇರಿ 13 ಮಂದಿ ಹಾಗೂ ನಾರಾಯಣ ನೇತ್ರಾಲಯದಲ್ಲಿ 31 ಮಕ್ಕಳು ಸೇರಿ 53 ಮಂದಿಗೆ ಚಿಕಿತ್ಸೆ ನೀಡಲಾಗಿದೆ.

ಹೆಚ್ಚಿನ ಮಕ್ಕಳು ಪಟಾಕಿ ಸಿಡಿಸುವುದನ್ನು ನೋಡುತಿದ್ದಾಗ ಕಣ್ಣಿನ ಗಾಯ ಮಾಡಿಕೊಂಡಿದ್ದಾರೆ. ಮಕ್ಕಳು ಪಟಾಕಿ ಸಿಡಿಸುವಾಗ ದೊಡ್ಡವರು ಗಮನ ಹರಿಸಬೇಕು. ಯಾವುದೇ ಗಾಯವಾದಲ್ಲಿ ತಡ ಮಾಡದೆ ಹತ್ತಿರದ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಬೇಕು. ಸಂಭಾವ್ಯ ಕಣ್ಣಿನ ಗಾಯಗಳಿಂದ ರಕ್ಷಿಸಿಕೊಳ್ಳಲು ರಕ್ಷಣಾ ಕನ್ನಡಕಗಳನ್ನು ಬಳಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ADVERTISEMENT

ನಾರಾಯಣ ನೇತ್ರಾಲಯದಲ್ಲಿ ಈವರೆಗೂ 51 ಮಂದಿ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ 18 ವರ್ಷದೊಳಗಿನವರು 31 ಪುರುಷರು ಹಾಗೂ 13 ಮಹಿಳೆಯರು ಸೇರಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 67 ವರ್ಷದ ವಿದೇಶಿ ವ್ಯಕ್ತಿಯೊಬ್ಬರ ಕಣ್ಣಿಗೆ ಪಟಾಕಿ ಕಿಡಿ ಸಿಡಿದು ಗಾಯವಾಗಿದ್ದು, ರೆಟಿನಾ ಪರೀಕ್ಷೆಗೆ ಒಳಪಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಪಟಾಕಿ ಸಿಡಿಸುವ ವೇಳೆ ಹತ್ತು ವರ್ಷದ ಬಾಲಕನ ಮುಖಕ್ಕೆ ಬೆಂಕಿ ತಾಗಿ, ಕಣ್ಣಿನ ರೆಪ್ಪೆಯ ಕೂದಲು ಸುಟ್ಟು ಹೋಗಿವೆ. ಕಾರ್ನಿಯಾದ ಮೇಲೆ ಮಸಿಯ ಕಣಗಳು ಅಂಟಿಕೊಂಡಿದ್ದು, ಗೀರುಗಳು ಬಿದ್ದಿವೆ ಹಾಗೂ ರೆಪ್ಪೆ ಊದಿಕೊಂಡಿತ್ತು. ಕಣ್ಣು ತೊಳೆದು, ಔಷಧ ನೀಡಲಾಯಿತು. ಕಾರ್ನಿಯಾ ವಿಭಾಗದಲ್ಲಿ ಚಿಕಿತ್ಸೆಗೆ ಸಮಯ ನಿಗದಿಪಡಿಸಲಾಗಿದೆ.

ಪಟಾಕಿ ಸಿಡಿಸುವ ವೇಳೆ ಗಾಯಗೊಂಡಿದ್ದ ಮೂವರು ಮಕ್ಕಳಿಗೆ ಡಾ.ಅಗರ್‌ವಾಲ್ಸ್‌ ಕಣ್ಣಿನ ಆಸ್ಪತ್ರೆಯ  ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

ಶಂಕರ್ ಕಣ್ಣಿನ ಆಸ್ಪತ್ರೆಯಲ್ಲಿ ಮೂವರು ಮಕ್ಕಳು ಹಾಗೂ ಎಂಟು ಮಂದಿ ವಯಸ್ಕರಿಗೆ ಚಿಕಿತ್ಸೆ ನೀಡಲಾಗಿದೆ. ಪಟಾಕಿ ಹಚ್ಚುವಾಗ ಸಣ್ಣ ಕಿಡಿಗಳು ತಾಗಿ ಸಣ್ಣ ಗಾಯವಾಗಿತ್ತು. ಕಣ್ಣುಗಳನ್ನು ತೊಳೆದು, ಹೆಚ್ಚಿನ ಆರೈಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.