ADVERTISEMENT

ಬೆಂಗಳೂರು: ಹಸಿರು ಪಟಾಕಿ ಬಳಕೆ ಕಡ್ಡಾಯವಾದರೂ ತಗ್ಗದ ಕಣ್ಣಿನ ಗಾಯ ಪ್ರಕರಣ

ವರುಣ ಹೆಗಡೆ
Published 20 ಅಕ್ಟೋಬರ್ 2025, 23:30 IST
Last Updated 20 ಅಕ್ಟೋಬರ್ 2025, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರಿಸರ ಸ್ನೇಹಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಿದರೂ, ಪಟಾಕಿ ಗಾಯ ಸಂಬಂಧ ನಗರದ ಕಣ್ಣಿನ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿಯೂ ಹಸಿರು ಪಟಾಕಿಗಳ ಬಳಕೆಗೆ ಮಾತ್ರ ಅವಕಾಶ ನೀಡಿ ಸುತ್ತೋಲೆ ಹೊರಡಿಸಿದೆ. ಕೆಲ ವರ್ಷಗಳಿಂದ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ 180ಕ್ಕೂ ಅಧಿಕ ಪಟಾಕಿ ಗಾಯ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷವೂ ಮುನ್ನೆಚ್ಚರಿಕೆ ಕ್ರಮವಾಗಿ ಈ ಆಸ್ಪತ್ರೆಗಳು ಪ್ರತ್ಯೇಕ ಹಾಸಿಗೆ ಸೇರಿ ವಿವಿಧ ಸಿದ್ಧತೆ ಮಾಡಿಕೊಳ್ಳುತ್ತಿವೆ.

ಪಟಾಕಿ ಗಾಯಗಳಿಗೆ ಸಂಬಂಧಿಸಿದಂತೆ ಹಬ್ಬದ ಅವಧಿಯಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 2020ರಲ್ಲಿ 23, 2021ರಲ್ಲಿ 33, 2022 ಹಾಗೂ 2023ರಲ್ಲಿ ತಲಾ 40 ಪ್ರಕರಣಗಳು ವರದಿಯಾಗಿದ್ದವು. ನಾರಾಯಣ ನೇತ್ರಾಲಯದಲ್ಲಿ ಕ್ರಮವಾಗಿ 24 ಮಂದಿ, 17 ಮಂದಿ, 45 ಮಂದಿ ಹಾಗೂ 58 ಮಂದಿ ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದಿದ್ದರು. ಕಳೆದ ವರ್ಷ ಹಬ್ಬದ ನಾಲ್ಕು ದಿನಗಳ ಅವಧಿಯಲ್ಲಿ ನಾರಾಯಣ ನೇತ್ರಾಲಯದಲ್ಲಿ 73 ಕಣ್ಣಿನ ಗಾಯ ಪ್ರಕರಣಗಳು ವರದಿಯಾಗಿದ್ದವು. ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಈ ಸಂಖ್ಯೆ 50ರ ಗಡಿ ದಾಟಿತ್ತು. ಉಳಿದಂತೆ ಶಂಕರ ಕಣ್ಣಿನ ಆಸ್ಪತ್ರೆ, ನೇತ್ರಧಾಮ, ಡಾ. ಅಗರ್‌ವಾಲ್ಸ್ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿಯೂ ಕಣ್ಣಿನ ಗಾಯ ಪ್ರಕರಣಗಳು ವರದಿಯಾಗಿದ್ದವು.

ADVERTISEMENT

ಮಕ್ಕಳೇ ಅಧಿಕ: ಪಟಾಕಿ ಸಿಡಿತದಿಂದ ಮಕ್ಕಳೇ ಹೆಚ್ಚಾಗಿ ಗಾಯಗೊಳ್ಳುತ್ತಿದ್ದಾರೆ. ಲಕ್ಷ್ಮಿ ಬಾಂಬ್, ಬಿಜಲಿ ಪಟಾಕಿ ಹಾಗೂ ಹೂ ಕುಂಡ ಸಿಡಿತ ಕಣ್ಣಿಗೆ ಅಪಾಯ ತಂದೊಡ್ಡುತ್ತಿವೆ. ಕಳೆದ ವರ್ಷ ಮಿಂಟೊ ಹಾಗೂ ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡವರಲ್ಲಿ ಪಟಾಕಿ ಸಿಡಿಸುವವರ ಜತೆಗೆ, ವೀಕ್ಷಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡು ದಾಖಲಾಗಿದ್ದರು. ಮಿಂಟೊದಲ್ಲಿ ಕಳೆದ ವರ್ಷ ಚಿಕಿತ್ಸೆ ಪಡೆದವರಲ್ಲಿ ಅರ್ಧದಷ್ಟು ಮಂದಿ ಪಟಾಕಿ ಸಿಡಿತ ವೀಕ್ಷಿಸುತ್ತಿರುವವರು, ಪಾದಚಾರಿಗಳು ಹಾಗೂ ವಾಹನ ಸವಾರರಾಗಿದ್ದಾರೆ. 

‘ಪಟಾಕಿ ಹಚ್ಚುವರಷ್ಟೇ ಅದನ್ನು ವೀಕ್ಷಿಸುವವರೂ ಎಚ್ಚರವಾಗಿರಬೇಕು. ಹಸಿರು ಪಟಾಕಿಗಳಾದರೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಪಟಾಕಿ ಸಿಡಿಸಬೇಕು’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ. ಶಶಿಧರ್ ತಿಳಿಸಿದರು. 

ಹಸಿರು ಪಟಾಕಿಗಳಲ್ಲಿಯೂ ನಿಗದಿತ ಪ್ರಮಾಣದಲ್ಲಿ ರಾಸಾಯನಿಕಗಳು ಇರುತ್ತವೆ. ಕಣ್ಣು ಸೂಕ್ಷ್ಮ ಅಂಗವಾಗಿರುವುದರಿಂದ ಸಣ್ಣ ಕಿಡಿಯೂ ದೊಡ್ಡ ಹಾನಿ ಮಾಡುತ್ತದೆ. ಸುರಕ್ಷತೆಗೆ ಆದ್ಯತೆ ನೀಡಬೇಕು
ಡಾ. ಶಶಿಧರ್ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕ
‘ಕಣ್ಣುಗಳಿಗೆ ಸುರಕ್ಷಿತವಲ್ಲ’
‘ಹಸಿರು ಪಟಾಕಿಗಳು ಪರಿಸರಕ್ಕೆ ಪೂರಕವಾದರೂ ಕಣ್ಣುಗಳಿಗೆ ಸುರಕ್ಷಿತವಲ್ಲ. ಹಸಿರು ಪಟಾಕಿಗಳಿಂದ ಅಪಾಯವಿಲ್ಲವೆಂಬ ಭಾವನೆಯಿಂದ ಕೆಲವರು ಮುನ್ನೆಚ್ಚರಿಕೆ ವಹಿಸದೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ ಶೇ 50ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಹಾನಿ ಮಾಡುವ ಬೇರಿಯಂ ಮತ್ತು ಲಿಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾದರೂ ಸ್ಫೋಟ ಮತ್ತು ಶಬ್ದದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ’ ಎಂದು ಡಾ. ಅಗರ್ವಾಲ್ಸ್ ಆಸ್ಪತ್ರೆಯ ನೇತ್ರತಜ್ಞೆ ಡಾ. ನೇಹಾ ವಸ್ತಾ ತಿಳಿಸಿದರು.  ‘ಪಟಾಕಿಗಳು ಸ್ಫೋಟಗೊಳ್ಳಲು ಬಳಸುವ ರಾಸಾಯನಿಕಗಳು ಅಪಾಯಕಾರಿಯಾಗಿದ್ದು ಅನಿರೀಕ್ಷಿತ ಸಿಡಿತಗಳು ಹಾಗೂ ಬೆಂಕಿಯ ಕಿಡಿಗಳು ಕಣ್ಣಿಗೆ ಹಾನಿ ಮಾಡಲಿವೆ. ಆದ್ದರಿಂದ ಪಟಾಕಿ ಸಿಡಿಸಲೇ ಬೇಕು ಎಂದಾದಲ್ಲಿ ಕನ್ನಡಕ ಧರಿಸುವಿಕೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.