ADVERTISEMENT

ಕ್ಷಮೆ ಕೇಳುವುದು ಮನುಷ್ಯನ ದೊಡ್ಡ ಗುಣ: ಡಾ.ಸಿ.ಎನ್. ಮಂಜುನಾಥ್

ಭಾಷೆ ಬಗೆಗಿನ ಕಮಲ್ ಹಾಸನ್ ಹೇಳಿಕೆ ಖಂಡಿಸಿದ ಸಂಸದ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 23:30 IST
Last Updated 1 ಜೂನ್ 2025, 23:30 IST
<div class="paragraphs"><p>ಸಮಾರಂಭದಲ್ಲಿ (ಕುಳಿತವರು ಎಡದಿಂದ) ಸುದೇಶ್ ಮಹಾನ್, ಪ್ರೇಮ್‌ದಾಸ್ ಅಡ್ಯಂತಾಯ, ಗೀತಾ ಸುರತ್ಕಲ್, ರೇಣುಕಾ ರೆಡ್ಡಿ ಮತ್ತು ರಮ್ಯಾ ನವೀನ್ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. </p></div>

ಸಮಾರಂಭದಲ್ಲಿ (ಕುಳಿತವರು ಎಡದಿಂದ) ಸುದೇಶ್ ಮಹಾನ್, ಪ್ರೇಮ್‌ದಾಸ್ ಅಡ್ಯಂತಾಯ, ಗೀತಾ ಸುರತ್ಕಲ್, ರೇಣುಕಾ ರೆಡ್ಡಿ ಮತ್ತು ರಮ್ಯಾ ನವೀನ್ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು.

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಭಾಷೆಯ ಮೇಲೆ ನಮಗೆ ಭಾವನಾತ್ಮಕ ಸಂಬಂಧ ಇರುತ್ತದೆ. ಕ್ಷಮೆ ಕೇಳುವುದು ಮನುಷ್ಯನ ದೊಡ್ಡ ಗುಣ. ಆದರೆ, ಅದನ್ನು ಏಕೆ ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿದ್ದಾರೋ ತಿಳಿಯುತ್ತಿಲ್ಲ’ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು. 

ADVERTISEMENT

ರಂಗಚಂದಿರ ಸಂಸ್ಥೆಯು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಡಿ.ಕೆ. ಚೌಟರ ನೆನಪಿನ ನಾಟಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಮಲ್ ಹಾಸನ್ ಅವರ ಹೆಸರು ಉಲ್ಲೇಖಿಸದೆ ಭಾಷೆ ಬಗೆಗೆ ಅವರು ನೀಡಿದ ಹೇಳಿಕೆಯನ್ನು ಖಂಡಿಸಿದರು. 

‘ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಶರೀರದಲ್ಲಿ ಮಿದುಳು, ಹೃದಯ ಸೇರಿ ಎಲ್ಲ ಅಂಗಾಂಗವೂ ಸವೆಯುತ್ತವೆ. ಆದರೆ, ನಾಲಿಗೆ ಮಾತ್ರ ಸವೆಯುವುದಿಲ್ಲ. ಇದೇ ಸಮಸ್ಯೆಗೆ ಕಾರಣವಾಗಿದೆ. ನಾಲಿಗೆಗೆ ಗಾಯವಾದರೆ ವಾಸಿಯಾಗುತ್ತದೆ, ನಾಲಿಗೆಯಿಂದ ಬೇರೆಯವರಿಗೆ ಗಾಯವಾದರೆ ಅದು ಮಾಯುವುದಿಲ್ಲ’ ಎಂದರು. 

‘ದಕ್ಷಿಣ ಭಾರತದಲ್ಲಿ ಇರುವುದು ದ್ರಾವಿಡ ಭಾಷೆಗಳು. ಒಂದು ಭಾಷೆಯಿಂದ ಮತ್ತೊಂದು ಭಾಷೆ ಹುಟ್ಟಿಲ್ಲ. ಎಲ್ಲವೂ ಸ್ವತಂತ್ರ ಭಾಷೆಗಳಾಗಿವೆ. ಕೆಲವರು ನಾಲಿಗೆಯನ್ನು ಹರಿಬಿಟ್ಟು ಸಮಸ್ಯೆಯನ್ನು ಉಂಟುಮಾಡುತ್ತಿದ್ದಾರೆ. ತಪ್ಪು ಮಾಡಿದರೆ, ನಮ್ಮ ಮಾತಿನಿಂದ ಬೇರೆಯವರಿಗೆ ನೋವಾಗಿದ್ದರೆ ಕ್ಷಮೆ ಕೇಳುವುದರಿಂದ ವ್ಯಕ್ತಿಯ ವ್ಯಕ್ತಿತ್ವ ದೊಡ್ಡದಾಗುತ್ತದೆ. ತಪ್ಪು ಮಾಡಿದರೆ ನಾವು ಚಿಕ್ಕಮಕ್ಕಳಿಗೂ ಕ್ಷಮೆ ಕೇಳುತ್ತೇವೆ. ಇದು ಮನುಷ್ಯನ ಅತಿ ದೊಡ್ಡ ಸಂಪತ್ತು. ಕನ್ನಡ ನಮಗೆ ಮಾತೃಭಾಷೆಯಾದರೆ, ಇಂಗ್ಲಿಷ್ ಬದುಕುವ ಭಾಷೆಯಾಗಿದೆ. ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸಿದರೂ, ಮನೆಯಲ್ಲಿ ಕನ್ನಡ ಬಳಸಬೇಕು. ಕನ್ನಡ ಕನ್ನಡಕವಾಗಿರದೆ ಕಣ್ಣಾಗಿರಬೇಕು’ ಎಂದು ಹೇಳಿದರು.

‘ನಾಟಕಗಳು ಸಮಾಜ ತಿದ್ದುವ, ಪರಿವರ್ತನೆ ಮಾಡುವ ಕೆಲಸ ಮಾಡಿವೆ. ನಮ್ಮ ಸುತ್ತಮುತ್ತಲು ನಡೆಯುವ ಘಟನೆಗಳನ್ನೇ ನಾಟಕದ ರೂಪದಲ್ಲಿ ತೋರಿಸಲಾಗುತ್ತಿದ್ದು, ಸಮಾಜ ಪರಿವರ್ತನೆಗೆ ಕಾರಣವಾಗುತ್ತಿವೆ. ರಾಮಾಯಣ, ಮಹಾಭಾರತವನ್ನು ಓದಿಲ್ಲದಿದ್ದರೂ ತಿಳಿದುಕೊಂಡಿದ್ದೇವೆ ಅಂದರೆ ಅದಕ್ಕೆ ಕಾರಣ ನಾಟಕಗಳು’ ಎಂದರು.

‘ಡಿ.ಕೆ ಚೌಟ ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೆ, ರಂಗಭೂಮಿಯ ದೈತ್ಯ ಶಕ್ತಿಯಾಗಿದ್ದರು. ಕಿರಿಯ ಕಲಾವಿದರನ್ನು ಅವರು ಪ್ರೋತ್ಸಾಹಿಸುತ್ತಿದ್ದರು’ ಎಂದು ಸ್ಮರಿಸಿಕೊಂಡರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ನಾಟಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಐವರಿಗೆ ರಂಗಗೌರವ ಸಲ್ಲಿಕೆ

ಸಮಾರಂಭದಲ್ಲಿ ಕಲಾ ನಿರ್ದೇಶಕ ಸುದೇಶ್ ಮಹಾನ್ ರಂಗಭೂಮಿ ಕಲಾವಿದರಾದ ಪ್ರೇಮ್‌ದಾಸ್‌ ಅಡ್ಯಂತಾಯ ಗೀತಾ ಸುರತ್ಕಲ್ ರೇಣುಕ ರೆಡ್ಡಿ ಹಾಗೂ ರಂಗಕರ್ಮಿ ರಮ್ಯಾ ನವೀನ್ ಅವರಿಗೆ ರಂಗಗೌರವ ಸಲ್ಲಿಸಲಾಯಿತು. ಬಳಿಕ ನಟಿ ಕಲ್ಪನಾ ಅವರ ಜೀವನಗಾಥೆ ಆಧಾರಿತ ಏಕವ್ಯಕ್ತಿ ನಾಟಕ ‘ಮಿನುಗುತಾರೆ’ ಪ್ರದರ್ಶಿಸಲಾಯಿತು. ಕೆ.ಎಸ್‌.ಡಿ.ಎಲ್‌.ಚಂದ್ರು ನಿರ್ದೇಶನದಲ್ಲಿ ರೂಪಾಂತರ ತಂಡ ಈ ನಾಟಕವನ್ನು ಪ್ರಸ್ತುತಪಡಿಸಿತು. ನಂಜುಂಡೇಗೌಡ ಸಿ. ನಿರ್ದೇಶನದಲ್ಲಿ ದೃಶ್ಯ ಕಾವ್ಯ ತಂಡವು ‘ಹುಲಿ ಹಿಡಿದ ಕಡಸು’ ನಾಟಕ ಪ್ರದರ್ಶನ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.