ಬೆಂಗಳೂರು: ಮತ ಕಳವು ವಿಚಾರದಲ್ಲಿ ರಾಜಕೀಯ ಪಕ್ಷಗಳ ನಾಯಕರಿಗೆ ನೋಟಿಸ್ ನೀಡಲು ಅವರು ಯಾರು? ಪ್ರಜಾಪ್ರಭುತ್ವದಲ್ಲಿ ಜನರ ದನಿಯಾಗಿ ನಾವು ಕೆಲಸ ಮಾಡುತ್ತೇವೆ. ಮತದ ಹಕ್ಕು ದುರುಪಯೋಗವಾಗಬಾರದು ಎನ್ನುವ ಕಾರಣಕ್ಕೆ ರಾಜಕೀಯ ಪಕ್ಷವಾಗಿ ನಾವು ಪ್ರಸ್ತಾಪಿಸಿದ್ದೇವೆ. ಇದಕ್ಕೆ ನೋಟಿಸ್ ನೀಡಿದರೆ ಹೇಗೆ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ನೋಟಿಸ್ ನೀಡಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ‘ಯಾರೇ ನೋಟಿಸ್ ನೀಡಿದರೂ ನಾವು ಹೆದರುವುದಿಲ್ಲ. ಅದಕ್ಕೆ ಉತ್ತರ ನೀಡುತ್ತೇವೆ. ಸಾಕ್ಷಿಯನ್ನೂ ಒದಗಿಸುತ್ತೇವೆ. ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ನಮಗೆ ನೋಟಿಸ್ ನೀಡಿರುವುದನ್ನು ಒಪ್ಪುವುದಿಲ್ಲ’ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬೆಂಗಳೂರಿನ ಯೋಜನೆಗಳ ಕುರಿತು ಚರ್ಚಿಸಿದ್ದೇನೆ. ಪ್ರಧಾನಿ ಜತೆಗಿದ್ದಾಗ ಅವರೊಂದಿಗೆ ನಕ್ಕಿದ್ದು, ಮಾತನಾಡಿದ್ದರ ಬಗ್ಗೆ ರಾಜಕೀಯ ಬೆರೆಸಬೇಕಾಗಿಲ್ಲ. ಬಿಜೆಪಿ ನಾಯಕರು, ಸಂಸದರು ನಮ್ಮೊಂದಿಗೆ ಇದ್ದರು. ಬೆಂಗಳೂರಿನ ಪ್ರಗತಿ ವಿಚಾರದಲ್ಲಿ ಸಂಸತ್ತಿನಲ್ಲಿ ಏನು ಮಾತನಾಡಿದ್ದಾರೆ. ಪ್ರಧಾನಿ ಅವರಲ್ಲಿ ಏನು ಕೇಳಿದರು ಎನ್ನುವುದನ್ನು ತಿಳಿಸಲಿ. ಈವರೆಗೂ ಹತ್ತು ರೂಪಾಯಿಯನ್ನು ಅವರು ಬೆಂಗಳೂರಿಗೆ ತಂದಿಲ್ಲ. ಖಾಲಿ ಕೊಡ ಎನ್ನುವುದು ಗೊತ್ತಿದೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.