ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷರಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಉಪಾಧ್ಯಕ್ಷರಾಗಿ ಕುದೂರು ರಾಜಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಮೂಲ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಸುರೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾಗಡಿ ತಾಲ್ಲೂಕಿನ ಕುದೂರು ರಾಜಣ್ಣ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದರು. ಈ ಎರಡು ಸ್ಥಾನಗಳಿಗೆ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಇಬ್ಬರೂ ಅವಿರೋಧವಾಗಿ ಆಯ್ಕೆಯಾದಂತಾಗಿದೆ. ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಇದೆ.
ಚುನಾವಣಾ ಪ್ರಕ್ರಿಯೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಶ್, ‘ಬಮೂಲ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷನನ್ನಾಗಿ, ಮಾಗಡಿ ತಾಲೂಕಿನ ಕುದೂರು ರಾಜಣ್ಣ ಅವರನ್ನು ಉಪಾಧ್ಯಕ್ಷರನ್ನಾಗಿ ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ’ ಎಂದು ತಿಳಿಸಿದರು.
‘ಒಮ್ಮತದಿಂದ ನನ್ನನ್ನು ಆಯ್ಕೆ ಮಾಡುವ ಮೂಲಕ ಸಹಕಾರ ಸಂಸ್ಥೆಯ ಜವಾಬ್ದಾರಿಯನ್ನು ನೀಡಿದ್ದಾರೆ. ಈ ಒಕ್ಕೂಟದ ಹಾಲು ಉತ್ಪಾದಕರು, ರೈತರು ನಮ್ಮ ಮೇಲೆ ನಿರೀಕ್ಷೆ ಇಟ್ಟು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಒಕ್ಕೂಟದಲ್ಲಿ ಬದಲಾವಣೆ ಬಯಸಿದ್ದಾರೆ. ಎಲ್ಲರ ಸಹಕಾರ ಪಡೆದು ಒಕ್ಕೂಟ ಹಾಗೂ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್: ‘ಕನಕಪುರ ಹಾಲಿನ ಒಕ್ಕೂಟದಲ್ಲಿ ಪರಿಚಯಿಸಿದ ಪರಿಸರಸ್ನೇಹಿ ಹಾಲಿನ ಪ್ಯಾಕೆಟ್ ಅನ್ನು ರಾಜ್ಯದಾದ್ಯಂತ ಪರಿಚಯಿಸುವ ಚಿಂತನೆ ಇದೆ. ಪ್ರಾಯೋಗಿಕವಾಗಿ ಒಂದು ಪಂಚಾಯಿತಿ ಮಟ್ಟದಲ್ಲಿ ಇದನ್ನು ವಿತರಿಸಿದ್ದೇವೆ. ಆಡಳಿತ ಮಂಡಳಿಯ ಸದಸ್ಯರೊಂದಿಗೆ ಇದರ ಸಾಧಕ ಬಾಧಕಗಳನ್ನು ವಿಸ್ತೃತವಾಗಿ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.